ಮಂಡ್ಯ: ಹಳೇ ಪಿಂಚಣಿ ಪದ್ಧತಿಯಲ್ಲಿ ಪ್ರತಿ ತಿಂಗಳು ಇಷ್ಟೇ ಹಣ ಬರುತ್ತದೆ ಎಂದು ಖಚಿತವಾಗಿ ಹೇಳಬಹುದಿತ್ತು. ಆದರೆ ಹೊಸ ಪಿಂಚಣಿ ನೀತಿಯಲ್ಲಿ ಆ ಭರವಸೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೆಗೌಡ ಅಭಿಪ್ರಾಯಪಟ್ಟರು.
ನಗರದ ರೈತ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ವೋಟ್ ಫಾರ್ ಒಪಿಎಸ್’ ಅಭಿಯಾನದ ಅಂಗವಾಗಿ ಹಳೇ ಪಿಂಚಣಿ ಹಕ್ಕೊತ್ತಾಯ ಪಾದಯಾತ್ರೆ ಹಾಗೂ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹೊಸ ಪಿಂಚಣಿ ಯೋಜನೆ ಬಗ್ಗೆ ಸರ್ಕಾರಿ ನೌಕರರಲ್ಲಿ ಹಲವು ಸಂಶಯಗಳಿದ್ದು, ಆತಂಕಗೊಂಡಿದ್ದಾರೆ. ಈ ಸಂಬಂಧ ಸರ್ಕಾರ ಯಾವುದೇ ಭರವಸೆ ನೀಡುತ್ತಿಲ್ಲ. ಇದರಿಂದ ನೌಕರರು ಸಮಸ್ಯೆಗೆ ಒಳಗಾಗಿದ್ದಾರೆ. ಪಿಂಚಣಿ ಇಲ್ಲದವರ ಬದುಕು ಅಮಾನವೀಯವಾಗಿದೆ. ಆದ್ದರಿಂದ ನೌಕರರ ಆತಂಕ ದೂರ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪೂರ್ಣ ಸಹಕಾರ ಬೇಕು. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಇದನ್ನು ಪ್ರಮುಖ ಚರ್ಚೆಯಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಅನುದಾನಿತ ನೌಕರರು ಕಳೆದ 70 ದಿನಗಳಿಂದ ಚಳವಳಿ ನಡೆಸುತ್ತಿದ್ದರೂ ಮಾತನಾಡಿಸುವವರು ಯಾರೂ ಇಲ್ಲ. ಸರ್ಕಾರಗಳು ಚಳವಳಿಗೆ ಬೆಲೆ ಕೊಡುತ್ತಿಲ್ಲ. ಕಡೇ ಪಕ್ಷ ಸಾಂತ್ವನ ಹೇಳುವ ಕೆಲಸವನ್ನೂ ಮಾಡುತ್ತಿಲ್ಲ. ಸಭೆ ಕರೆಯುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದರೂ ಗಮನಹರಿಸುತ್ತಿಲ್ಲ. ಇದು ಚುನಾವಣಾ ಸಂದರ್ಭವಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಸಚಿವರ ಮೇಲೆ ಒತ್ತಡ ತರಬೇಕಾದ ಅವಶ್ಯಕತೆಯಿದೆ. ಬೇಡಿಕೆ ಈಡೇರಿಸದಿದ್ದರೆ ಚುನಾವಣೆಯಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ನೀಡಬೇಕು. ಇದಕ್ಕಾಗಿ ನೌಕರರಲ್ಲಿ ಒಗ್ಗಟ್ಟು ಅಗತ್ಯ. ಹಾಗಾದಾಗ ಮಾತ್ರ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಎಂದು ತಿಳಿಸಿದರು.
ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಸರ್ಕಾರದ ಕೆಲಸಗಳಲ್ಲಿ ಮಹತ್ವದ ಪಾತ್ರ ವಹಿಸುವ ನೌಕರರ ನಿವೃತ್ತಿಯ ನಂತರದ ಬದುಕು ಗೌರವ ಮತ್ತು ಘನತೆಯದ್ದಾಗಿರಲು ಪಿಂಚಣಿ ಅನಿವಾರ್ಯ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜಾರಿಗೆ ತಂದಿದ್ದ ನೂತನ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಪ್ರಾರಂಭದಲ್ಲಿ ನೌಕರರಿಗೆ ಆಶಾದಾಯಕ ಭರವಸೆ ಹುಟ್ಟಿಸಿದ್ದ ಈ ಯೋಜನೆ, ಇದೀಗ ವಾಸ್ತವ ಪರಿಸ್ಥಿತಿಯಲ್ಲಿ ನೌಕರರ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತಿದೆ. ನಿವೃತ್ತಿಯಾಗುತ್ತಿರುವ ನೌಕರರಿಗೆ 2-3 ಸಾವಿರವಷ್ಟೇ ನಿವೃತ್ತಿ ವೇತನ ದೊರೆಯುತ್ತಿದ್ದು, ನಿವೃತ್ತಿಯ ಬದುಕನ್ನು ಆತಂಕಕ್ಕೆ ದೂಡಿದೆ ಎಂದರು.
ಈಗಾಗಲೇ ಕೇರಳ ಮತ್ತು ಪಶ್ಚಿಮ ಬಂಗಾಳ ಹಳೇ ಯೋಜನೆಯನ್ನು ಒಪ್ಪಿದ್ದು, ಇನ್ನುಳಿದ 5 ರಾಜ್ಯಗಳು ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಿವೆ. ನಿವೃತ್ತ ನ್ಯಾಯಾಧೀಶರಿಗೆ/ ಶಾಸಕರಿಗೆ/ ಸಂಸದರ ಪಿಂಚಣಿ ಯೋಜನೆ ಜಾರಿಯಲ್ಲಿದೆ. ಹೊಸ ಪಿಂಚಣಿ ಯೋಜನೆಯ ಪರಿಣಾಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆಗೆ ಮುನ್ನ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಅವರು, ಸದನದ ಒಳಗೆ ಹಾಗೂ ಹೊರಗೆ ಇದರ ಬಗ್ಗೆ ಹೋರಾಟ ನಡೆಸಲು ಸಿದ್ಧನಿದ್ದು, ತಾರ್ಕಿಕ ಅಂತ್ಯ ದೊರಕುವವರೆಗೂ ನಿಮ್ಮ ಹೋರಾಟಕ್ಕೆ ಸಹಕಾರ ನೀಡಲಾಗುವುದು. ನೌಕರರು ಧೃತಿಗೆಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಚುನಾವಣೆಗೂ ಮುನ್ನ ನಿಮ್ಮ ಬೇಡಿಕೆ ಈಡೇರಲಿ. ಹಳೇ ಪಿಂಚಣಿ ಯೋಜನೆ ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಈ ವಿಷಯ ಸೇರಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಲಾಗಿದೆ. ಸದಾ ನಿಮ್ಮ ಹೋರಾಟದ ಜತೆಗಿದ್ದು, ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮು ಮಾತನಾಡಿ, ನಮ್ಮ ಉಳಿವಿಗಾಗಿ ಸರ್ಕಾರವನ್ನು ಆಗ್ರಹಿಸಿ ಡಿ.19 ರಂದು ಫ್ರೀಡಂ ಪಾರ್ಕ್‌ನಲ್ಲಿ ‘ಮಾಡು ಇಲ್ಲವೇ ಮಡಿ’ ಬೃಹತ್ ಹೋರಾಟವನ್ನು ರೂಪಿಸಲಾಗಿದೆ. ಎಲ್ಲ ನೌಕರರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ನಿಂಗೇಗೌಡ ಮಾತನಾಡಿದರು. ಜೆಡಿಎಸ್ ಜಿಲ್ಲಾ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ, ಸಂಘದ ನಾಗಣ್ಣಗೌಡ, ಮಂಜುನಾಥ್, ಸಿದ್ದಪ್ಪ, ಗುರುಸ್ವಾಮಿ, ಕೇಶವ ಪ್ರಸಾದ್, ಸರಸ್ವತಮ್ಮ, ಬಿ.ಬಿ.ಸಿದ್ದರಾಜು, ಮನುಕುಮಾರ್, ಕೃಷ್ಣೇಗೌಡ, ಕೆಂಚರಂಗಯ್ಯ ಇತರರಿದ್ದರು.
ಸಮಾವೇಶಕ್ಕೂ ಮುನ್ನ ನೀಲಿಬಣ್ಣದ ಬಾವುಟ ಹಿಡಿದು ನೌಕರರು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನೇತೃತ್ವದಲ್ಲಿ ರೈತ ಸಭಾಂಗಣದ ಆವರಣದಿಂದ ಹೊರಟು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ನಂತರ ಘೋಷಣೆಗಳನ್ನು ಕೂಗುತ್ತಾ ಆರ್.ಪಿ.ರಸ್ತೆ ಕೆ.ಆರ್.ರಸ್ತೆ, ವಿ.ವಿ. ರಸ್ತೆ, ಮಹಾವೀರ ವೃತ್ತದ ಮೂಲಕ ಮೆರವಣಿಗೆ ನಡೆಸಿ ರೈತ ಸಭಾಂಗಣ ತಲುಪಿ ಸಮಾವೇಶದಲ್ಲಿ ಪಾಲ್ಗೊಂಡರು.