ಬಳ್ಳಾರಿ: ದೇಶದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಜನಗಣತಿ ಪಾತ್ರ ಪ್ರಮುಖವಾಗಿದೆ. ಜನಗಣತಿಯ ಪೂರ್ವಭಾವಿಯಾಗಿ ಏ.15ರಿಂದ ಮನೆಗಣತಿ ಹಾಗೂ ಎನ್‌ಪಿಆರ್ ದಾಖಲೀಕರಣ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ಪರಿಷ್ಕರಣೆ ಕುರಿತು ಜನಗಣತಿ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಗುರುವಾರ ಉದ್ಘಾಟಿಸಿ ಮಾತನಾಡಿದರು. ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹ ಕಾರ್ಯ ನಡೆಯಲಿದೆ. ಅಧಿಕಾರಿಗಳು ಕೈಪಿಡಿ ಹಾಗೂ ಆ್ಯಪ್ ಬಗ್ಗೆ ಸಮರ್ಪಕವಾಗಿ ಮಾಹಿತಿ ತಿಳಿದುಕೊಂಡು ಜವಾಬ್ದಾರಿಯೊಂದಿಗೆ ಕೆಲಸ ಮಾಡಬೇಕೆಂದು ಸೂಚಿಸಿದರು.
2021ರ ಜನಗಣತಿ ಆಧರಿಸಿ 2031ರವರೆಗೆ ದೇಶದಲ್ಲಿ ಅಭಿವೃದ್ಧಿ ಯೋಜನೆಗಳು ಜಾರಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಗಣತಿದಾರರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್ ಎಚ್ಚರಿಸಿದರು. ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೀಶ ಶಿವಾಚಾರ್ಯ ಜನಗಣತಿಯ ಉದ್ದೇಶ ತಿಳಿಸಿದರು. ಸಂಪನ್ಮೂಲ ಅಧಿಕಾರಿ ರಾಮಾಂಜನಿ ತರಬೇತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ, ಹೊಸಪೇಟೆ ಉಪವಿಭಾಗಾಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ವಿಶ್ವಜಿತ್ ಮೆಹತಾ ಇತರರಿದ್ದರು.