ನಾಪೋಕ್ಲು: ಶಿಕ್ಷಣಕ್ಕಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.
ಮಡಿಕೇರಿ ತಾಲೂಕು ಭಾಗಮಂಡ ಹೋಬಳಿಯ ತಾವೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ತಾವೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಗುಣಮಟ್ಟ ಪಾಲನೆಗಾಗಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದಲ್ಲಿ ತೊಡಕು ಆಗಬಾರದು ಎಂಬ ಉದ್ದೇಶದಿಂದ, ಸಕಲ ಸವಲತ್ತುಗಳನ್ನೂ ಕಲ್ಪಿಸಲು ಬದ್ಧವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲಿಕ್ಕಾಗಿ ವಿದ್ಯಾರ್ಜನೆ ಮಾಡಬೇಕು. ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಅಧ್ಯಕ್ಷ ಕೋಳಿಬೈಲು ವೆಂಕಟೇಶ, ಕೆಡಿಪಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಉಪಾಧ್ಯಕ್ಷ ಗಿರೀಶ, ಮುಖಂಡರಾದ ರಮಾನಾಥ, ಬೇಕಲ್ ಹರ್ಷ, ಪ್ರಕಾಶ ಇತರರು ಹಾಜರಿದ್ದರು.