ಜಿಲ್ಲೆ

ಇದೀಗ ಜಿಕಾ ವೈರಸ್ ಆತಂಕ ; ಜಿಲ್ಲೆಯಲ್ಲಿ ಅಲರ್ಟ್


ಅವಿನಾಶ್ ಜೈನಹಳ್ಳಿ ಮೈಸೂರು
ಮಹಾಮಾರಿ ಕರೊನಾ ನಂತರ ಇದೀಗ ಜಿಕಾ ವೈರಸ್ ಆತಂಕ ಶುರುವಾಗಿದೆ. ಎಲ್ಲೆಡೆ ತಲ್ಲಣ ಸೃಷ್ಟಿಸಿರುವ ಜಿಕಾ ವೈರಸ್ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾದ್ಯಂತ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ರೋಗಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಕರೊನಾ ಮಹಾಮಾರಿ ಮರೆಯಾಯಿತು ಎನ್ನುವಷ್ಟರಲ್ಲಿ ಇದೀಗ ರಾಯಚೂರು ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಗೆ ಜಿಕಾ ವೈರಸ್ ಇರುವುದು ಪತ್ತೆಯಾಗಿರುವುದರಿಂದ ಆರೋಗ್ಯ ಇಲಾಖೆ ಜಿಲ್ಲೆ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ಎಲ್ಲ ಪ್ರಾಥಮಿಕ, ಸಮುದಾಯ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.


ಸೊಳ್ಳೆಗಳ ಮೂಲಕ ಹರಡುವ ಸೋಂಕು ಇದು. ಏಡಿಸ್ ಪ್ರಭೇದಕ್ಕೆ ಸೇರಿದ ಸೊಳ್ಳೆಗಳು ಕಚ್ಚುವುದರಿಂದ ಈ ಸೋಂಕು ಹರಡುತ್ತದೆ. ಈ ಸೊಳ್ಳೆಗಳು ರಾತ್ರಿ ಮಾತ್ರವಲ್ಲದೆ, ಹಗಲು ಕೂಡ ಕಚ್ಚುವ ಸಾಧ್ಯತೆ ಇದೆ. ರಕ್ತ ವರ್ಗಾವಣೆ ಮತ್ತು ಅಸುರಕ್ಷಿತ ಲೈಂಗಿಕತೆಯಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಗಾಗಿ, ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ರೋಗಿಗಳ ಮೇಲೆ ನಿಗಾ ವಹಿಸಲಾಗುತ್ತದೆ. ಈ ಸಂಬಂಧ ಈಗಾಗಲೇ 20ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ಎಲ್ಲವೂ ನೆಗೆಟಿವ್ ಬಂದಿವೆ.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಎಸ್. ಚಿದಂಬರ್ ನೇತೃತ್ವದಲ್ಲಿ ಜಿಲ್ಲಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವೂ ನಡೆಯುತ್ತಿದೆ. ಮಳೆ ನೀರು ಒಂದೇ ಕಡೆ ಸಂಗ್ರಹವಾಗಿದ್ದರೆ, ಸೊಳ್ಳೆಗಳ ಸಂತತಿ ಜಾಸ್ತಿಯಾಗಲಿದೆ. ಹಾಗಾಗಿ ಮಳೆ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಬೇಕು. ಹೂವಿನ ಕುಂಡ, ಬಿಸಾಡಿದ ಟಯರ್, ತೊಟ್ಟಿ, ನೀರಿನ ಬಾಟಲಿಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಅಂಥ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ, ಶುಚಿಗೊಳಿಸಬೇಕು. ಸೊಳ್ಳೆಗಳು ಮೊಟ್ಟೆ ಇಡಲು ಅವಕಾಶವಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆಗಳ ತಾಣಗಳನ್ನು ಗುರುತಿಸಿ, ನಾಶಪಡಿಸಬೇಕು. ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು. ಹೆಚ್ಚು ದಿನಗಳ ಕಾಲ ಸಂಗ್ರಹವಾಗುವ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಇಂಥ ಸ್ಥಳಗಳನ್ನು ಗುರುತಿಸಿ, ಔಷಧ ಸಿಂಪಡಣೆ ಮಾಡಿ ಸೊಳ್ಳೆಗಳ ಸಂತತಿಯನ್ನು ನಾಶಪಡಿಸಬೇಕು ಎಂದು ಮನೆ ಮನೆಗೂ ತೆರಳಿ ಅರಿವು ಮೂಡಿಸುತ್ತಿದ್ದಾರೆ.
ಇನ್ನು ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ ಅಥವಾ ಪ್ರಸವ ಸಂದರ್ಭದಲ್ಲಿ ಹರಡುವ ಸಾಧ್ಯತೆ ಹೆಚ್ಚಿದೆ. ಈ ಸಮಯದಲ್ಲಿ ವೈರಸ್ ಸೋಂಕು ಕಂಡುಬಂದರೆ ಶಿಶುವಿನ ತಲೆಯ ಗಾತ್ರ ಅದೇ ವಯಸ್ಸಿನ ಇತರ ಶಿಶುಗಳಿಗಿಂತ ಚಿಕ್ಕದಾಗಿರುತ್ತದೆ. ನರಮಂಡಲದ ಸಮಸ್ಯೆಗಳಿಂದ ಗೊಲೆಬ್-ಬ್ಯಾರಿ ಲಕ್ಷಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿವೆ. ಆದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಗರ್ಭಿಣಿಯರು ಇರುವ ಮನೆಗಳಿಗೆ ಹೋಗಿ ತಪಾಸಣೆ ನಡೆಸುತ್ತಿದ್ದಾರೆ.

ಜಿಕಾ ಸೋಂಕಿತರ ಸಾಮಾನ್ಯ ಲಕ್ಷಣಗಳು:
ಜ್ವರ , ಸ್ನಾಯುನೋವು, ದೇಹದ ದದ್ದುಗಳು, ತಲೆನೋವು, ಕೀಲುನೋವು, ಕೆಂಪು ಕಣ್ಣುಗಳು… ಇತ್ಯಾದಿ ಈ ಸೋಂಕಿಗೆ ಒಳಗಾಗಿರುವವರ ಸಾಮಾನ್ಯ ಲಕ್ಷಣಗಳು. ಅನೇಕ ದಿನಗಳವರೆಗೆ ಈ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಜಿಕಾದ ಲಕ್ಷಣಗಳು ಸೊಳ್ಳೆಗಳಿಂದ ಹರಡುವ ಡೆಂೆ ಮತ್ತು ಚಿಕೂನ್‌ಗುನ್ಯಾದಂತಹ ಇತರ ಕಾಯಿಲೆಗಳಿಗೆ ಹೋಲುತ್ತವೆ. ರಕ್ತ ಮತ್ತು ಮೂತ್ರವನ್ನು ಪರೀಕ್ಷಿಸಿದಾಗ ಈ ಸೋಂಕು ಇರುವುದು ಕಂಡುಬರುತ್ತದೆ.
ಈ ಸೋಂಕು ಕಂಡುಬಂದವರು ಸಾಕಷ್ಟು ದ್ರವ ಆಹಾರಗಳನ್ನು ತೆಗೆದುಕೊಳ್ಳುವ ಮೂಲಕ ನಿರ್ಜಲೀಕರಣವನ್ನು ತಡೆಯಬೇಕು . ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜ್ವರ ಮತ್ತು ನೋವು ಕಡಿಮೆ ಮಾಡಲು ಔಷಧಗಳನ್ನು ತೆಗೆದುಕೊಳ್ಳಬೇಕು. ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಸಲಹೆ ನೀಡಿದ್ದಾರೆ.

ಜಿಕಾ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ. ಸೊಳ್ಳೆಗಳ ಕಡಿತದಿಂದ ಸ್ವಯಂ ಹಾಗೂ ಕುಟುಂಬವನ್ನು ರಕ್ಷಿಸಬೇಕು. ಸಾಧ್ಯವಾದರೆ ಹವಾನಿಯಂತ್ರಿತ ಕೊಠಡಿಗಳನ್ನು ಬಳಸಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಬಳಸಬೇಕು. ಹೊರಾಂಗಣದಲ್ಲಿ ಮಲಗುವುದನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಉದ್ದನೆಯ ತೋಳಿನ ಶರ್ಟ್ ಮತ್ತು ಉದ್ದವಾದ ಪ್ಯಾಂಟ್‌ಧರಿಸಬೇಕು.ಡಾ.ಕೆ.ಎಚ್. ಪ್ರಸಾದ್, ಜಿಲ್ಲಾ ಆರೋಗ್ಯಾಧಿಕಾರಿ