ನೋಂದಣಿ ಇಲಾಖೆಯಲ್ಲಿನ ಅಕ್ರಮಗಳಿಗೆ ತಡೆ ಹಾಕುವ ಜತೆಯಲ್ಲೇ ಇನ್ನಷ್ಟು ಜನಸ್ನೇಹಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ನೋಂದಣಿಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ.
ನೋಂದಣಿ ವ್ಯವಸ್ಥೆಯಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳೇ ಆಗಿಲ್ಲ. ತಂತ್ರಜ್ಞಾನದ ಬಳಕೆಯೂ ಸರಿ ಇಲ್ಲ. ಹೀಗಾಗಿಯೇ ನೋಂದಣಿ ಕಾಯ್ದೆಯಲ್ಲಿ ಮೂರು ಪ್ರಮುಖ ಬದಲಾವಣೆ ತರಲಾಗುತ್ತಿದೆ. ಆನ್ಲೈನ್ ಮೂಲಕ ಸೇವೆ ಜಾಲ ವಿಸ್ತರಿಸುವುದು ಜತೆಗೆ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಂಚಕ್ಕೆ ಬ್ರೇಕ್ ಹಾಕಿ ಜನಜಂಗುಳಿ ತಪ್ಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಭೂಮಿ, ನಿವೇಶನ, ಮನೆ ಖರೀದಿ, ಬ್ಯಾಂಕ್ಗಳಲ್ಲಿ ಸಾಲಪತ್ರಗಳ ನೋಂದಣಿಗೆ ಇನ್ನು ಮುಂದೆ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಮಾರಾಟ ಮಾಡುವ ಏಜೆನ್ಸಿಗಳು ಹಾಗೂ ಬ್ಯಾಂಕ್ಗಳಲ್ಲಿಯೇ ಆನ್ಲೈನ್ ನೋಂದಣಿ ಮಾಡುವ ವ್ಯವಸ್ಥೆ ತರಲಾಗುತ್ತಿದೆ.
ಕಚೇರಿಯಲ್ಲಿಯೇ ನೋಂದಣಿ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಕೆಐಎಡಿಬಿ, ಬಿಡಿಎ, ಮೂಡಾ, ಕೆಎಸ್ಎಸ್ಐಡಿಸಿ, ನಗರಾಭಿವೃದ್ಧಿ ಪ್ರಾಧಿಕಾರಗಳು, ಕರ್ನಾಟಕ ಗೃಹಮಂಡಳಿ, ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮ, ಕೊಳಗೇರಿ ಅಭಿವೃದ್ಧಿ ಮಂಡಳಿಗಳಲ್ಲಿ ಮನೆ ಅಥವಾ ನಿವೇಶನ ಖರೀದಿ ಮಾಡಿದಾಗ ಆಯಾ ಸಂಸ್ಥೆಗಳಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಸೇಲ್ಡೀಡ್ ಹಾಗೂ ಇತರೆ ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ದಾಖಲೆಗಳು ಆನ್ಲೈನ್ನಲ್ಲಿಯೇ ಲಭ್ಯವಾಗುತ್ತವೆ. ಆದರೆ ಇಡೀ ಪ್ರಕ್ರಿಯೆಯನ್ನು ವಿಡೀಯೋ ಚಿತ್ರೀಕರಣ ಮಾಡುವುದು ಕಡ್ಡಾಯವಾಗಲಿದೆ.
ಬ್ಯಾಂಕ್ಗಳಲ್ಲಿ ನೋಂದಣಿ: ರಾಜ್ಯದಲ್ಲಿ ವರ್ಷಕ್ಕೆ 25 ಲಕ್ಷದಷ್ಟು ಸಾಲ ಪತ್ರ ನೋಂದಣಿಯಾಗುತ್ತವೆ. ಅಷ್ಟೇ ಪ್ರಮಾಣದಲ್ಲಿ ಸಾಲಪತ್ರ ವಾಪಸ್ ಪಡೆಯುತ್ತಾರೆ. ಆದ್ದರಿಂದ ಶೆಡ್ಯೂಲ್ ಬ್ಯಾಂಕ್ಗಳಲ್ಲಿ ಸಾಲ ನೀಡುವ ಸಂದರ್ಭದಲ್ಲಿ ನೋಂದಣಿಯನ್ನು ಅದೇ ಬ್ಯಾಂಕ್ನಲ್ಲಿಯೇ ಮಾಡುವ ವ್ಯವಸ್ಥೆ ತರಲಾಗುತ್ತದೆ. ಅಲ್ಲಿಯೂ ಆನ್ಲೈನ್ನಲ್ಲಿಯೇ ದಾಖಲೆಗಳನ್ನು ಅಪ್ಲೋಡ್ ಮಾಡುವ, ವಿಡೀಯೋ ಚಿತ್ರೀಕರಣ ಮಾಡುವ ವ್ಯವಸ್ಥೆ ಇರುತ್ತದೆ. ಸದ್ಯಕ್ಕೆ ಶೆಡ್ಯೂಲ್ ಬ್ಯಾಂಕ್ಗಳಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಬ್ಯಾಂಕ್ಗಳಿಗೂ ವಿಸ್ತರಣೆ ಮಾಡಲಾಗುತ್ತದೆ.
ರೇರಾ ಯೋಜನೆಗಳಲ್ಲಿ ಹೇಗೆ?
ಖಾಸಗಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ರೇರಾದಲ್ಲಿ ನೋಂದಣಿ ಕಡ್ಡಾಯವಿದೆ. ಖಾಸಗಿಯವರ ಯಾವ ಯೋಜನೆ ರೇರಾದಲ್ಲಿ ನೋಂದಣಿಯಾಗಿದೆಯೋ ಅಂತಹ ಸಂಸ್ಥೆಗಳಲ್ಲಿಯೇ ಆಸ್ತಿಯ ನೋಂದಣಿ ಮಾಡುವ ಬಗ್ಗೆ ಪರಿಶೀಲನೆಯಲ್ಲಿದೆ. ಆಧಾರ್ ಲಿಂಕ್ ಮಾಡುವ ಮೂಲಕ ಖಾಸಗಿ ಸಂಸ್ಥೆಗಳಲ್ಲಿಯೇ ನೋಂದಣಿಗೂ ಅವಕಾಶ ನೀಡಬಹುದೇ ಎಂಬ ಸಾಧಕ-ಬಾಧಕ ನೋಡಲಾಗುತ್ತಿದೆ. ಪರಿಶೀಲನೆಯ ನಂತರ ಅಧಿಕಾರಿಗಳು ಸಲ್ಲಿಸುವ ವರದಿ ಆಧರಿಸಿ ಸರ್ಕಾರ ನಿರ್ಧಾರ ಮಾಡಲಿದೆ.
ಏನೆಲ್ಲಾ ಬದಲಾವಣೆ?
ಬಿಡಿಎ, ಕೆಐಎಡಿಬಿ, ಕೆಎಸ್ಎಸ್ಐಡಿಸಿ ನೋಂದಣಿಗಿಲ್ಲ ಅಲೆದಾಟ
ಬ್ಯಾಂಕ್ಗಳಲ್ಲಿಯೇ ಶೆಡ್ಯುಲ್ ಬ್ಯಾಂಕ್ಗಳ ಸಾಲದ ರಿಜಿಸ್ಟ್ರೇಶನ್
ರೇರಾ ಅನುಮೋದಿತ ಯೋಜನೆ ನೋಂದಣಿ ಅದೇ ಕಚೇರಿಯಲ್ಲಿ
ನೋಂದಣಿಗೆ ಪಕ್ಷಕಾರರು ಹಾಗೂ ಸಾಕ್ಷಿಗಳ ಆಧಾರ್ ಕಡ್ಡಾಯ
ಮೂರು ಬದಲಾವಣೆ
2. ಲಂಚ ಕೇಳುವ ಪ್ರವೃತ್ತಿಗೆ ಬ್ರೇಕ್ ಹಾಕುವುದು
3. ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಜನದಟ್ಟಣೆಗೆ ಬ್ರೇಕ್
ಆಧಾರ್ ಕಡ್ಡಾಯ
ಪ್ರತಿ ನೋಂದಣಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಮಾಡಲಾಗುತ್ತಿದೆ. ಯಾರದೋ ಜಮೀನು ಇನ್ನಾರಿಗೋ ನೋಂದಣಿಯಾಗುತ್ತಿದೆ. ಮಾಲೀಕರು ನಾವೇ ಎಂಬ ತಪು್ಪ ಮಾಹಿತಿ ನೀಡಿ ಆಸ್ತಿಗಳ ನೋಂದಣಿಯಾಗಿ ನಂತರ ನ್ಯಾಯಾಲಯದ ಮೆಟ್ಟಿಲು ಹತ್ತುವ ಪ್ರಕರಣಗಳು ಇರುವುದರಿಂದ ಅದನ್ನು ತಪ್ಪಿಸಲು ಆಸ್ತಿ ಮಾರಾಟಗಾರ, ಖರೀದಿದಾರ, ಸಾಕ್ಷಿಗಳ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಲಿದೆ. ವಾಹನ ಚಾಲನಾ ಪರವಾನಗಿ, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಗುರುತಿನ ಚೀಟಿಯಾಗಿ ಪಡೆಯಬಹುದು. ಆದರೆ ನಕಲಿ ಮಾಡಲು ಅವಕಾಶಗಳಿವೆ. ನೈಜತೆಯ ದೃಢೀಕರಣ ಇವುಗಳಿಂದ ಆಗುತ್ತಿಲ್ಲ. ಆಧಾರ್ ಆದರೆ ನಕಲಿ ಅಷ್ಟು ಸುಲಭವಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆಧಾರ್ ಬಳಸಲಿದೆ. ಇದಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆಯೂ ಸಿಕ್ಕಿದೆ. ಪಕ್ಷಕಾರರು ಮಾತ್ರವಲ್ಲದೇ ದಸ್ತಾವೇಜು ಬರೆಯುವವರ ಆಧಾರ್ ಸಹ ನೀಡಬೇಕಾಗುತ್ತದೆ. ಆಧಾರ್ ಬಳಕೆ ಕಡ್ಡಾಯದ ನಿರ್ಧಾರಕ್ಕೆ ಕೇಂದ್ರದ ಅನುಮತಿ ಪಡೆಯಬೇಕಾಗುತ್ತದೆ. ತಿದ್ದುಪಡಿ ಬಳಿಕ ಕೇಂದ್ರಕ್ಕೂ ಕಳುಹಿಸಿ ಒಪ್ಪಿಗೆ ಪಡೆಯಲಾಗುತ್ತದೆ.
ಆನ್ಲೈನ್ನಲ್ಲಿ ಇಸಿ
ನೋಂದಣಿಯಲ್ಲಿ ಅಗತ್ಯವಾದ ಋಣಭಾರ ಪ್ರಮಾಣಪತ್ರವನ್ನು (ಇಸಿ) ಸಹ ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆ ತರಲಾಗುತ್ತಿದೆ. ಈಗ ಇಸಿ ಪಡೆಯಬೇಕೆಂದರೆ ಕನಿಷ್ಠ 2 ರಿಂದ 3 ದಿನಗಳ ಕಾಲ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆಯಬೇಕಿದೆ.