ಆರ್.ಕೃಷ್ಣ ಮೈಸೂರು
ಹೆತ್ತವರಿಗೆ ಮದುವೆ ಭಾರ ಇಳಿಸಲು ಮುಂದಾಗಿರುವ ಸರ್ಕಾರ ಈಗ ‘ಮಾಂಗಲ್ಯ ಭಾಗ್ಯ’ದ ಮೂಲಕ ಸಾಮೂಹಿಕ ವಿವಾಹ ಆಯೋಜಿಸಿದೆ. ಈ ಹಿಂದೆ ‘ಸಪ್ತಪದಿ’ ಹೆಸರಿನಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹದ ಹೆಸರನ್ನು ಮಾರ್ಪಡಿಸಿ ಈಗಿನ ಸರ್ಕಾರ ‘ಮಾಂಗಲ್ಯ ಭಾಗ್ಯ’ ಹೆಸರಿನಲ್ಲಿ ಸಾಮೂಹಿಕ ಕಲ್ಯಾಣ ಕಾರ್ಯ ನಡೆಸಲು ಮುಂದಾಗಿದೆ.
ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಜಿಲ್ಲೆಯಲ್ಲಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಜ. 31ರಂದು ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
ಮದುವೆ ಎನ್ನುವುದು ಹೆಣ್ಣು-ಗಂಡಿನ ಜೀವನದಲ್ಲಿ ಮಹತ್ವದ ಘಟ್ಟ. ಹಾಗಿದ್ದರೂ ಇತ್ತೀಚಿನ ದಿನಗಳಲ್ಲಿ ವಿವಾಹ ಎನ್ನುವುದು ಆಡಂಬರದ, ತೋರಿಕೆಯ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಇದರಿಂದ ಸಾಕಷ್ಟು ಪಾಲಕರು ಸಾಲ ಸೋಲ ಮಾಡಿ ಮಕ್ಕಳ ಮದುವೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಹೆತ್ತವರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಆಡಂಬರದ ಮದುವೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕುವ ಬಡ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ವರದಿಗಳನ್ನೂ ತಜ್ಞರು ನೀಡಿದ್ದರು.
ಈ ಹಿಂದೆ ರಾಜ್ಯದಲ್ಲಿ ರೈತರ ಸಾಲು ಸಾಲು ಆತ್ಮಹತ್ಯೆ ನಡೆದ ಸಂದರ್ಭದಲ್ಲಿ ಸರ್ಕಾರ ಮದುವೆ ಭಾರ ಇಳಿಸಲು ಸಾಮೂಹಿಕ ವಿವಾಹ ಪರಿಕಲ್ಪನೆಯನ್ನು ಜಾರಿಗೆ ತಂದಿತ್ತು. ತಾಳಿಭಾಗ್ಯದ ಮೂಲಕ ವಧು-ವರರಿಗೆ ಸುಮಾರು 40 ಸಾವಿರ ರೂ. ವರೆಗೆ ಬೆಲೆ ಬಾಳುವ ಮಾಂಗಲ್ಯ, ಬಟ್ಟೆ, ನಗದು ಸಹ ನೀಡುವ ಯೋಜನೆ ಜಾರಿಗೊಳಿಸಿತ್ತು. ಬಳಿಕ ಆಡಳಿತಕ್ಕೆ ಬಂದ ಸರ್ಕಾರ ಅದನ್ನು ‘ಸಪ್ತಪದಿ’ ಹೆಸರಿನಲ್ಲಿ ಮುಂದುವರಿಸಿತು.
ಈಗ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ‘ಸಪ್ತಪದಿ’ ಹೆಸರಿನಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹವನ್ನು ‘ಮಾಂಗಲ್ಯ ಭಾಗ್ಯ’ದ ಮೂಲಕ ಮುಂದುವರಿಸಿದೆ. ಒಂದು ಜೋಡಿಗೆ 40 ಸಾವಿರ ರೂ.ವರೆಗೆ ನೀಡುವ ಹಣದ ಮಿತಿಯನ್ನು 55 ಸಾವಿರ ರೂ.ವರೆಗೆ ಏರಿಕೆ ಮಾಡಲಾಗಿದೆ. ಅಲ್ಲದೆ, ಈ ಹಿಂದೆ ಆಯ್ದ 100 ದೇವಾಲಯಗಳಲ್ಲಿ ಮಾತ್ರ ಜಾರಿಗೆ ತಂದಿದ್ದ ಈ ಯೋಜನೆಯನ್ನು ಜನರ ಪ್ರತಿಕ್ರಿಯೆ ನೋಡಿಕೊಂಡು ಇದೀಗ ರಾಜ್ಯದ ಎಲ್ಲ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ನೋಂದಣಿ ಹೇಗೆ?:
ವಿವಾಹಕ್ಕೆ ನೋಂದಣಿ ಮಾಡಿಕೊಳ್ಳುವ ವಧು- ವರರ ಜನ್ಮ ದಿನಾಂಕ ನಿಖರವಾಗಿ ನೀಡಬೇಕು. ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ತುಂಬಿರಬೇಕು. ವಯಸ್ಸಿನ ದೃಢೀಕರಣಕ್ಕೆ ಜನನ ಪ್ರಮಾಣಪತ್ರ ಅಥವಾ ಎಸ್‌ಎಸ್‌ಎಲ್ಸಿ ಅಂಕಪಟ್ಟಿ ಕೊಡಬೇಕು. ಒಂದು ವೇಳೆ ವಧು-ವರರು ಅನಕ್ಷರಸ್ಥರಾಗಿದ್ದು, ಜನ್ಮ ದಿನಾಂಕದ ದಾಖಲೆ ಇಲ್ಲದಿದ್ದರೆ ವಯಸ್ಸಿನ ದೃಢೀಕರಣಕ್ಕಾಗಿ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳಿಂದ ವಯಸ್ಸಿನ ದೃಢೀಕರಣ ಪತ್ರ ನೀಡಬೇಕು. ಸ್ಥಳೀಯ ವಾಸದ ದೃಢೀಕರಣ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಪಾಲಕರ ಸಮ್ಮತಿ ಪತ್ರ ಇರಬೇಕಾದದ್ದು ಕಡ್ಡಾಯ.
ಸಾಮೂಹಿಕ ವಿವಾಹ ಆದ ನಂತರ ವಿವಾಹವನ್ನು ನೋಂದಣಿ ಮಾಡಿಸಬೇಕು. ‘ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ, ಕ್ರಿಮಿನಲ್ ಹಿನ್ನೆಲೆ ಇಲ್ಲ’ ಎಂದು ಲಿಖಿತ ಹೇಳಿಕೆ ನೀಡಬೇಕು.
ವಧು-ವರರಿಗೆ ಸಹಾಯಧನ:
ವಿವಾಹಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ವರನಿಗೆ 5 ಸಾವಿರ ರೂ., ವಧುವಿಗೆ 10 ಸಾವಿರ ರೂ. ಹಾಗೂ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಖರೀದಿಸಲು 40 ಸಾವಿರ ರೂ.ಸೇರಿದಂತೆ ಒಂದು ಜೋಡಿಗೆ ಒಟ್ಟು 55 ಸಾವಿರ ರೂ ಪ್ರೋತ್ಸಾಹಧನ ನೀಡಲಾಗುವುದು. ಜತೆಗೆ, ವಧು-ವರರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿಗಳೇ ಮಾಡಲಿವೆ.
13ರಂದು ಅಂತಿಮ ದಿನಾಂಕ:
ಜಿಲ್ಲಾಡಳಿತದಿಂದ ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಜ. 13 ಅಂತಿಮ ದಿನಾಂಕವಾಗಿದೆ. ಅರ್ಜಿಗಳನ್ನು ತಾಲೂಕು ಕಚೇರಿಗಳು, ಜಿಲ್ಲೆಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನಗಳು, ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ಶಾಖೆಯಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2590 027, 2590 082 ಸಂಪರ್ಕಿಸಬಹುದು.
ಯೋಜನೆ ಉಪಯೋಗಿಸಿಕೊಳ್ಳಿ
ಅನಗತ್ಯ ವೆಚ್ಚ, ದುಂದುಗಾರಿಕೆಯನ್ನು ನಿಲ್ಲಿಸಿ, ಸರಳವಾಗಿ ಸಾಮೂಹಿಕ ವಿವಾಹ ಆಗುವುದನ್ನು ಪ್ರೋತ್ಸಾಹಿಸಲು ಸರ್ಕಾರ ಯೋಜನೆ ಜಾರಿಗೆ ತಂದಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಜ. 31ರಂದು ‘ಮಾಂಗಲ್ಯ ಭಾಗ್ಯ’ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಅರ್ಹರು ಜ.31ರೊಳಗೆ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಮದುವೆ ವಿಚಾರವಾಗಿಯೇ ಸಾಲದ ಸುಳಿಯಲ್ಲಿ ಯಾರೂ ಸಿಲುಕಬಾರದು ಎಂಬುದು ಯೋಜನೆಯ ಉದ್ದೇಶ.
ಆರ್.ಲೋಕನಾಥ್
ಅಪರ ಜಿಲ್ಲಾಧಿಕಾರಿ, ಮೈಸೂರು