ಬೆಳಗಾವಿ: ಖ್ಯಾತ ಲೇಖಕ ತರಾಸು ತಮ್ಮ ‘ದುರ್ಗಾಸ್ತಮಾನ’ ಕಾದಂಬರಿಯಲ್ಲಿ ಬಳಿಸಿದ ಭಾಷೆ ತುಂಬ ಅಪ್ಯಾಯಮಾನವಾದುದು. ಸಂಪೂರ್ಣ ಚಿತ್ರದುರ್ಗದ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ತರಾಸು ಬರವಣಿಗೆಯಿದ್ದು, ಕನ್ನಡವನ್ನು ಎಷ್ಟು ಸುಂದರವಾಗಿ, ಸಮರ್ಥವಾಗಿ ಬಳಿಸಿಕೊಳ್ಳಬಹುದು ಎಂಬುದಕ್ಕೆ ಇವರ ಲೇಖನಿ ಮಾದರಿಯಾಗಿದೆ ಎಂದು ನಾಟಕಕಾರ ಶಿರೀಷ ಜೋಶಿ ಅಭಿಪ್ರಾಯಪಟ್ಟರು.
ನಗರದ ರಂಗಸಂಪದ ತಂಡದ ಸಮಾಸದಿಂದ ರವಿ ಹಿರೇಮಠ ನಿವಾಸದಲ್ಲಿ ಏರ್ಪಡಿಸಿದ್ದ ತರಾಸು ಅವರ ಐತಿಹಾಸಿಕ ಕಾದಂಬರಿ ದುರ್ಗಾಸ್ತಮಾನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಪ್ಪು ಗ್ರಹಿಕೆಗಳನ್ನು ತೊಡೆದು ಹಾಕಿ ಐತಿಹಾಸಿಕವಾಗಿ ಸಾಕ್ಷಾಧಾರಗಳಿಂದ ವಸ್ತುಸ್ಥಿತಿಗಳನ್ನು ಓದುಗರೆದುರು ತೆರೆದಿಡುವುದೇ ಒಬ್ಬ ಬರಹಗಾರನ ಆದ್ಯ ಕರ್ತವ್ಯ. ಈ ಕಾದಂಬರಿ ಐತಿಹಾಸಿಕ ಕಾದಂಬರಿ ಬರೆಯುವವರಿಗೊಂದು ಮಾದರಿಯಾಗಿದೆ ಎಂದರು.
ಡಾ.ಭವ್ಯಾ ಸಂಪಗಾರ, ಮಮತಾ ಶಂಕರ, ಮನೋಜ ಚರಂತಿಮಠ, ಪ್ರೊ.ಅಶೋಕ ಬೈಲವಾಡ, ಸಿಮಾ ಕುಲಕರ್ಣಿ, ಪದ್ಮಾ ಕುಲಕರ್ಣಿ ಮಾತನಾಡಿದರು. ಸಮಾಸ ಸಂಚಾಲಕ ಡಾ.ಅರವಿಂದ ಕುಲಕರ್ಣಿ, ರವಿ ಹಿರೇಮಠ, ವೀಣಾ ಹೆಗಡೆ, ಪ್ರಸಾದ ಕಾರಜೋಳ ಇದ್ದರು.