ಜಿಲ್ಲೆ

ಗ್ರೇಟರ್ ಬೆಂಗಳೂರು ಜಾಹೀರಾತು ಬೈಲಾಗೆ ಅಧಿಸೂಚನೆ

ಬೆಂಗಳೂರು: ಮಹಾನಗರದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಸುವ್ಯವಸ್ಥೆಯ ರೂಪ ನೀಡುವ ಹಾಗೂ ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕಲು ಹಲವು ಅಂಶಗಳುಳ್ಳ ‘ಗ್ರೇಟರ್ ಬೆಂಗಳೂರು ಜಾಹೀರಾತು ಬೈಲಾ’ ಅಧಿಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ 3-4 ವರ್ಷದಿಂದ ನಗರದಲ್ಲಿ ಜಾಹೀರಾತು ಹಾವಳಿಗೆ ತಡೆ ಹಾಕಲು ಬಿಬಿಎಂಪಿ ಹಲವು ಕ್ರಮ ಕೈಗೊಂಡಿದ್ದರೂ, ಯಾವುದೇ ಪ್ರಯೋಜನ ಆಗಿರಲಿಲ್ಲ. ಹೈಕೋರ್ಟ್ ಕೂಡ ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಆದೇಶಿಸಿತ್ತು. ಆದರೆ, ಜಾಹೀರಾತು ಲಾಬಿಗೆ ಒಳಗಾಗಿದ್ದ ಪಾಲಿಕೆ ನಿಯಮದಂತೆ ಬೈಲಾ ಹಾಗೂ ಮಾರ್ಗಸೂಚಿ ಸಿದ್ಧಪಡಿಸಲು ವಿಫಲವಾಗಿತ್ತು. ಇದನ್ನಾಧರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬಳಿಕ ಹಲವು ಸುತ್ತಿನ ಸಭೆಗಳ ನಂತರ ನಗರಾಭಿವೃಧ್ಧಿ ಇಲಾಖೆಯು ಬಿಬಿಎಂಪಿ ಸಲಹೆ ಆಧರಿಸಿ ಹೊಸ ಬೈಲಾವನ್ನು ಅಂತಿಮಗೊಳಿಸಿ ಅಧಿಸೂಚನೆ ಬಿಡುಗಡೆಗೊಳಿಸಿದೆ.

ಇತ್ತೀಚಿಗೆ ಬಿಬಿಎಂಪಿ ಗ್ರೇಟರ್ ಬೆಂಗಳೂರು ಆಗಿ ಮೇಲ್ದರ್ಜೆಗೇರಿದ ನಂತರ ಹೊಸ ಬೈಲಾ ಅನ್ವಯ ಜಾರಿಗೆ ತರಬೇಕಿತ್ತು. ಇದಕ್ಕೆ ಕೆಲ ಅಂಶಗಳನ್ನು ಸೇರಿಸಿ ‘ಜಾಹೀರಾತು ಉಪವಿಧಿ-2024’ ಬೈಲಾವನ್ನು ಅಳವಡಿಸಿಕೊಳ್ಳಲಾಗುತ್ತದೆ. ಮುಖ್ಯವಾಗಿ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಸುತ್ತಮುತ್ತಲಿನ 1 ಕಿ.ಮೀ. ಆಸುಪಾಸಿನಲ್ಲಿ ಯಾವುದೇ ರೀತಿಯ ಜಾಹೀರಾತು ಲಕಕ್ಕೆ ಅವಕಾಶ ಇರುವುದಿಲ್ಲ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿಯಮವನ್ನು ಇನ್ನಷ್ಟು ಬಿಗಿ ಮಾಡಲಾಗಿದೆ. ಹಾಗಾಗಿ ವಿಧಾನಸೌಧ, ವಿಕಾಸಸೌಧ ಇರುವ ಡಾ. ಅಂಬೇಡ್ಕರ್ ವೀಧಿ, ಚಾಲುಕ್ಯ ವೃತ್ತ, ಸ್ಯಾಂಕಿ ರಸ್ತೆ, ರಾಜಭವನ ರಸ್ತೆ, ಕೆ.ಆರ್.ರಸ್ತೆ, ನೃಪತುಂಗ ರಸ್ತೆ, ಅರಮನೆ ರಸ್ತೆ, ಸಿಟಿ ಸಿವಿಲ್ ಕೋರ್ಟ್ ಇರುವ ಹಳೇ ಅಂಚೆ ಕಚೇರಿ ರಸ್ತೆ, ಲಾಲ್‌ಬಾಗ್/ಕಬ್ಬನ್ ಪಾರ್ಕ್ ಆವರಣದ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಅನಧಿಕೃತ ಪ್ರದರ್ಶನಕ್ಕೆ ದುಪ್ಪಟ್ಟು ದಂಡ:

ಇನ್ನು ಮುಂದೆ ಅನಧಿಕೃತ ಜಾಹೀರಾತು ಪ್ರದರ್ಶಿಸಿದರೆ ಅಂತಹ ವ್ಯಕ್ತಿ, ಕಂಪನಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಎಫ್​ಐಆರ್ ಹಾಕಿ ದುಪ್ಪಟ್ಟು ದಂಡವನ್ನು ಸಂಗ್ರಹಿಸಲಾಗುತ್ತದೆ. ಆದರೆ, ಪ್ರದರ್ಶನಕ್ಕೆ ಅವಕಾಶ ಇರುವ ಸ್ಥಳಗಳಲ್ಲಿ ಆಯಾ ವಲಯದ ಆಯುಕ್ತರಿಂದ ಕಡ್ಡಾಯ ಅನುಮತಿ ಪಡೆಯಬೇಕಾಗುತ್ತದೆ. ಜತೆಗೆ ಬಸ್, ಆಟೋ ಸೇರಿ ಇತರ ವಾಹನಗಳ ಮೇಲೆ ಜಾಹೀರಾತು ಹಾಕಲು ಅವಕಾಶ ನೀಡಲಿದ್ದು, ಬಿಬಿಎಂಪಿಯಿಂದ ಕಡ್ಡಾಯ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಹೊಸ ಬೈಲಾ ಜಾರಿಗೆ ಬರಲಿರುವುದರಿಂದ ಬಿಬಿಎಂಪಿಗೆ ಹೆಚ್ಚಿನ ಸಂಪನ್ಮುಲ ಸಂಗ್ರಹವಾಗುವ ನಿರೀಕ್ಷೆ ಇದೆ.

ಜಾಹೀರಾತು ನಿಯಂತ್ರಣ ಸಮಿತಿ ರಚನೆ

ಮಹಾನಗರದಲ್ಲಿ ಅನಧಿಕೃತ ಜಾಹೀರಾತಿಗೆ ಕಡಿವಣಾ ಹಾಕಲು ಹಾಗೂ ವ್ಯವಸ್ಥೆಯನ್ನು ಸುಧಾರಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ನೇತೃತ್ವದಲ್ಲಿ ‘ಜಾಹೀರಾತು ನಿಯಂತ್ರಣ ಪ್ರಾಧಿಕಾರ’ವನ್ನು ರಚಿಸಲಾಗಿದೆ. ಈ ಸಮಿತಿಯ ಅಧ್ಯಕ್ಷರಾಗಿ ಎಸಿಎಸ್ ಇರಲಿದ್ದು, ನಗರ ಪೊಲೀಸ್ ವಿಭಾಗದ ಜಂಟಿ ಆಯುಕ್ತರು (ಸಂಚಾರ), ಬೆಸ್ಕಾಂ ಎಂಡಿ, ಬಿಬಿಎಂಪಿಯ ತರಿಗೆ/ಹಣಕಾಸು ಸಮಿತಿಯ ಚೇರ್‌ಮನ್, ಉಪ ಆಯುಕ್ತ (ಜಾಹೀರಾತು ವಿಭಾಗ), ವಿಶೇಷ ಆಯುಕ್ತ (ಕಂದಾಯ, ಎಸ್ಟೇಟ್), ಮುಖ್ಯ ಇಂಜಿನಿಯರ್ (ಮೂಲಸೌಕರ್ಯ ವಿಭಾಗ) ಸದಸ್ಯರಾಗಿರುತ್ತಾರೆ. ಜಾಹೀರಾತು ವಿಭಾಗದ ವಿಶೇಷ ಆಯುಕ್ತರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಜಾಹೀರಾತು ಕಂಪನಿಗಳ ಸಂಘದ ಪ್ರತಿಯೊಬ್ಬರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ.

ಜಾಹೀರಾತು ದರಪಟ್ಟಿ ವಿವರ:

ಮಾರ್ಗಸೂಚಿ ದರದ ರಸ್ತೆ ಶುಲ್ಕ * (ಮಾಸಿಕ)

3 ಸಾವಿರ ರೂ.ಗಿಂತ ಕಡಿಮೆ 40 ರೂ.

3-5 ಸಾವಿರ ರೂ. ವರೆಗೆ 50 ರೂ.

5-10 ಸಾವಿರ ರೂ. ವರೆಗೆ 60 ರೂ.

10-20 ಸಾವಿರ ರೂ. ವರೆಗೆ 70 ರೂ.

20-50 ಸಾವಿರ ರೂ. ವರೆಗೆ 80 ರೂ.

50 ಸಾವಿರದಿಂದ 1 ಲಕ್ಷ ವರೆಗೆ 90 ರೂ.

1 - 2 ಲಕ್ಷ ರೂ. ವರೆಗೆ 100 ರೂ.

2 ಲಕ್ಷ ರೂ. ಮೇಲ್ಪಟ್ಟು 110 ರೂ.

* ಪ್ರತಿ ಚದರ ಅಡಿಗೆ