ವಿಜಯವಾಣಿ ಸುದ್ದಿಜಾಲ ಧಾರವಾಡ
ಮಳೆಗಾಲದಲ್ಲಿ ಚರಂಡಿಯಲ್ಲಿ ಕಸ, ಕಡ್ಡಿ, ಹೂಳು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮತ್ತು ಜನಜೀವನ ಅಸ್ತವ್ಯಸ್ತಗೊಳಿಸುವ ಸಂಭಾವ್ಯ ಪ್ರದೇಶಗಳಲ್ಲಿ ಮಹಾನಗರಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯ ಮತ್ತು ಜನರ ಅಭಿಪ್ರಾಯ ತಿಳಿಯಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಂಗಳವಾರ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಕಾರ್ಯಪ್ರಗತಿ ಪರಿಶೀಲಿಸಿದರು.
ಬಸ್ ಡಿಪೊ ಸರ್ಕಲ್, ರಾಜಕಾಲುವೆ, ಮದಿಹಾಳ, ನಿಜಾಮುದ್ದೀನ ಕಾಲನಿ, ಎಂ.ಆರ್. ನಗರ, ಸಿಬಿ ನಗರ, ಭಾವಿಕಟ್ಟಿಪ್ಲಾಟ್, ಬಸವನಗರ ನಾಲಾ ಪ್ರದೇಶಗಳಿಗೆ ಭೇಟಿ ನೀಡಿ, ನಾಲಾ ಸ್ವಚ್ಛಗೊಳಿಸಿದ್ದನ್ನು ಪರಿಶೀಲಿಸಿದರು. ಕೆಲ ಕಡೆಗಳಲ್ಲಿ ಜನರು ಪ್ಲಾಸ್ಟಿಕ್, ಕಸ ಹಾಕಿರುವುದನ್ನು ಕಂಡು ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ತಪ್ಪಿದಲ್ಲಿ ಮಹಾನಗರ ಪಾಲಿಕೆ ನಿಯಮದಂತೆ ದಂಡ ವಿಧಿಸಿ ಎಂದು ಸೂಚಿಸಿದರು.
ಮುಂಗಾರು ಪೂರ್ವ ಮಳೆಗಳಿಂದ ಮತ್ತು ಮಾನ್ಸೂನ ಮಳೆಗಳಿಂದ ಉಂಟಾಗುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಮತ್ತು ಜನಜೀವನ ಅಸ್ತವ್ಯಸ್ತ ಆಗದಂತೆ ಮುನ್ನೆಚರಿಕೆ ವಹಿಸಲು ಪ್ರತಿ ವಲಯಕ್ಕೆ ಒಂದು ಪ್ರ ಕಾರ್ಯಪಡೆ ರಚಿಸಲು ಮತ್ತು ಈಗಾಗಲೇ ಇರುವ ಪಡೆಗಳಿಗೆ ಪ್ರದೇಶಗಳ ಹಂಚಿಕೆ ಮಾಡಿ, ಜನರ ದೂರಿಗೆ ಸ್ಪಂದಿಸಲು ಸೂಚಿಸಿದರು.
ನಗರದಲ್ಲಿನ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬ, ಜೋತು ಬಿದ್ದಿರುವ ತಂತಿ, ಇತರ ಸಮಸ್ಯೆಗಳನ್ನು ಪರಿಶೀಲಿಸಿ, ಮೇ ತಿಂಗಳ ಅಂತ್ಯಕ್ಕೆ ಎಲ್ಲವನ್ನೂ ಸರಿಪಡಿಸಿದ ವರದಿ ಪಡೆಯುವಂತೆ ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಮಳೆ, ಗಾಳಿ ಹಾಗೂ ಇತರ ಪ್ರಕೃತಿ ವಿಕೋಪದಿಂದ ತೊಂದರೆ ಉಂಟಾದಾಗ ಜನರು ತಕ್ಷಣ ಸಂಪಕಿರ್ಸಲು ಅನುಕೂಲವಾಗುವಂತೆ ಮಹಾನಗರ ಪಾಲಿಕೆಯ ಎಲ್ಲ ವಲಯ ಆಯುಕ್ತರ ಮತ್ತು ಪಾಲಿಕೆ ಸಹಾಯವಾಣಿ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಜನರು ದೂರು ಸಲ್ಲಿಕೆಗೆ ಪಾಲಿಕೆ ದೂರವಾಣಿ ಸಂಖ್ಯೆ 0836&2213888, 2213869, 2213886 ಸಂಪಕಿರ್ಸಬಹುದು ಎಂದರು.
ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ವಲಯ ಆಯುಕ್ತ ಸಂತೋಷ ಯರಂಗಳಿ, ಆನಂದ ಕಾಂಬಳೆ ಸ್ವಚ್ಛತಾ ಕಾರ್ಯ, ಚರಂಡಿ ದುರಸ್ತಿ ಕಾಮಗಾರಿಗಳ ಮಾಹಿತಿ ನೀಡಿದರು.