ಶಿರಸಿ; ಬೆಳೆ ವಿಮೆ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು. ರೈತರ ಪರವಾಗಿ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಸೂಚನೆ ನೀಡಿದರು.
ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ಇತ್ತೀಚೆಗೆ ದಾಸನಕೊಪ್ಪದಲ್ಲಿ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರಿಗಳು ಮತ್ತು ರೈತರ ಸಭೆ ನಡೆಸಿ ಅವರು ಮಾತನಾಡಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ ಮಾಹಿತಿ ನೀಡಿ, ಕಳೆದ ವರ್ಷದ ಅಡಕೆ ಬೆಳೆಯ ವಿಮಾ ಅವಧಿ ಜುಲೈ 31ಕ್ಕೆ ಪೂರ್ಣಗೊಂಡಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಅಧಿಕ ಮಳೆಯಾಗಿರುವ ಕಾರಣ ಹವಾಮಾನ ಆಧಾರಿತ ಬೆಳೆ ವಿಮೆಯ ಮಾನದಂಡದ ಪ್ರಕಾರ ಬೆಳೆ ವಿಮೆ ಪರಿಹಾರ ಬರುವ ನಿರೀಕ್ಷೆಯಲ್ಲಿ ನಾವಿದ್ದೇವೆ. ವಿಮಾ ಕಂಪನಿಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಕೆಲ ದಿನಗಳಲ್ಲಿಯೇ ಬೆಳೆ ವಿಮೆ ಪರಿಹಾರ ಮಂಜೂರಾಗುವ ಸಾಧ್ಯತೆ ಇದೆ. ಅಡಕೆ ಬೆಳೆಯಲ್ಲಿ ಪ್ರತಿ ಹೆಕ್ಟೇರ್‌ಗೆ 1.28 ಲಕ್ಷ ರೂ. ಪರಿಹಾರ ಮಂಜೂರಾಗುವ ನಿರೀಕ್ಷೆ ಇದೆ ಎಂದರು.
ರೈತ ಸಂಘದ ರಾಘವೇಂದ್ರ ನಾಯ್ಕ ಕಿರವತ್ತಿ ಇತರರು ಆಕ್ಷೇಪ ವ್ಯಕ್ತಪಡಿಸಿ, ಕಳೆದ ಮೂರು ವರ್ಷಗಳಿಂದ ಬನವಾಸಿ ಮತ್ತು ದಾಸನಕೊಪ್ಪ ಹೋಬಳಿಗೆ ನಿರೀಕ್ಷಿತ ಪ್ರಮಾಣದ ಬೆಳೆ ವಿಮೆ ಪರಿಹಾರ ಮಂಜೂರಾಗಿಲ್ಲ. ಪ್ರತಿ ವರ್ಷವೂ ಹೋರಾಟ ನಡೆಸಿಯೇ ಬೆಳೆ ವಿಮೆ ಪರಿಹಾರ ಪಡೆದುಕೊಳ್ಳುತ್ತಿದ್ದೇವೆ ಎಂದರು.
ದಾಸನಕೊಪ್ಪದಲ್ಲಿ ರೈತರು ಪ್ರತಿಭಟನೆ ನಡೆಸಿದ ಬಳಿಕವೇ ಅಧಿಕಾರಿಗಳು ಸಭೆ ಕರೆದಿದ್ದಾರೆ. ಪ್ರತಿಭಟನೆ ಮೊದಲೇ ಸಭೆ ಕರೆದು ಬಗೆಹರಿಸಿದರೆ ಅನುಕೂಲ ಆಗಲಿದೆ. ದಾಸನಕೊಪ್ಪ ಮತ್ತು ಬನವಾಸಿ ಭಾಗದ ರೈತರಿಗೆ ಬೆಳೆ ವಿಮೆ ಎಷ್ಟು ಮಂಜೂರಾಗಲಿದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡಬೇಕು. ವಿಮೆ ಹಣ ಕಟ್ಟುವದೇ ಕಷ್ಟ. ಆದರೂ ರೈತರಿಗೆ ಅನ್ಯಾಯ ಆಗುತ್ತಿದೆ. ಪಂಚಾಯಿತಿ ಮಳೆ ಘಟಕ ಮಾಹಿತಿ ಪಡೆಯದಿದ್ದರೆ ತಾಲೂಕು ಆಧರಿಸಿ ವಿಮೆ ಕೊಡಲಿ ಎಂದು ರೈತರು ಆಗ್ರಹಿಸಿದರು.
ತಹಸೀಲ್ದಾರ ಶ್ರೀಧರ ಮುಂದಲಮನಿ ಮಾತನಾಡಿ, ಅಕ್ಕಪಕ್ಕ ಗ್ರಾಮಗಳಲ್ಲಿ ಪಂಚಾಯಿತಿ ಬೇರೆ ಆಗಿದ್ದರೆ ಪರಿಹಾರ ಮಂಜೂರಿಯಲ್ಲಿ ವ್ಯತ್ಯಾಸ ಇರಲಿದೆ ಎಂದರು.
ಪ್ರತಿಕ್ರಿಯಿಸಿದ ಕೆ. ಕಾವ್ಯಾರಾಣಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಿದರು.
ವಿಮಾ ಕಂಪನಿ ಪ್ರತಿನಿಧಿ ಅಣ್ಣಪ್ಪ ನಾಯ್ಕ ಮಾತನಾಡಿದರು. ಅಧಿಕಾರಿಗಳಾದ ಡಿಎಸ್‌ಪಿ ಗಣೇಶ ಕೆ.ಎಲ್, ಮಧುಕರ ನಾಯ್ಕ, ಗಣೇಶ ಹೆಗಡೆ, ಬಿಇಒ ನಾಗರಾಜ ನಾಯ್ಕ, ಹೆಸ್ಕಾಂ ಅಧಿಕಾರಿ ನಾಗರಾಜ ಪಾಟೀಲ, ಡಾ. ವಿನಾಯಕ ಕಣ್ಣಿ, ರೈತ ಸಂಘದ ಪರಶುರಾಮ ದಾಂಗೆ, ಜಯಪುತ್ರ ರಂಗಾಪುರ, ಮಲ್ಲಿಕಾರ್ಜುನ ರಂಗಾಪುರ, ರಾಜೇಶ ಕಂಡ್ರಾಜಿ, ಶಶಿ ಉಮ್ಮಡಿ ಇದ್ದರು.
ರೈತರ ಬೇಡಿಕೆಗಳು
* ಬನವಾಸಿ ಹೋಬಳಿಯಲ್ಲಿರುವ ಮಳೆಮಾಪನ ಕೇಂದ್ರವನ್ನು ತಕ್ಷಣ ಸರಿಪಡಿಸಬೇಕು. ಪ್ರತಿ ವರ್ಷವೂ ಮಳೆಮಾಪನ ಕೇಂದ್ರ ಹಾಳಾಗುವುದರಿಂದ ಮಳೆ ಎಷ್ಟಾಗಿದೆ ಎಂಬ ನಿಖರ ಮಾಹಿತಿ ಲಭಿಸುತ್ತಿಲ್ಲ. ಇದರಿಂದಾಗಿ ಬೆಳೆ ಪರಿಹಾರ ವಿತರಣೆಗೂ ಸಮಸ್ಯೆ ಆಗುತ್ತಿದೆ.
* ಈ ವರ್ಷ ಅಧಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಹೀಗಾಗಿ, ರೈತರ ಬೆಳೆ ಸಾಲ ಮನ್ನಾ ಮಾಡಬೇಕು.
* ಹಾವೇರಿ-ಶಿರಸಿ ಮಾರ್ಗ ತಕ್ಷಣ ದುರಸ್ತಿ ಆಗಬೇಕು.
* ಅತಿಕ್ರಮಣ ಹಕ್ಕುಪತ್ರ ನೀಡಬೇಕು.
* ದಾಸನಕೊಪ್ಪದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು.
* ಬದನಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿರಬೇಕು.
* ಬದನಗೋಡ ಭಾಗದಲ್ಲಿ ಪಿಯು ಕಾಲೇಜು ಆರಂಭಿಸಬೇಕು
-----------
ಕಳೆದ ವರ್ಷದಲ್ಲಿ ಜುಲೈ ಅಂತ್ಯದವರೆಗೆ ತಾಲೂಕಿನಲ್ಲಿ 14020 ರೈತರು, 7035 ಹೆಕ್ಟೇರ್ ಬೆಳೆಗೆ ವಿಮೆ ಮಾಡಿಸಿದ್ದಾರೆ. ತಾಲೂಕಿನಲ್ಲಿ ರೈತರು 4.50 ಕೋಟಿ ರೂ. ವಿಮಾ ಕಂತು ಕಟ್ಟಿದ್ದಾರೆ. ಎಷ್ಟು ಹಣ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಸೋಮವಾರ ಲಭ್ಯವಾಗಲಿದೆ. ಅಣ್ಣಪ್ಪ ನಾಯ್ಕ, ವಿಮಾ ಕಂಪನಿ ಪ್ರತಿನಿಧಿ