ಜಿಲ್ಲೆ

ಮೀನುಗಳ ಮರಣ ತಡೆಗಟ್ಟಲು ಸೂಚನೆ

ಅವಿನಾಶ್ ಜೈನಹಳ್ಳಿ

ನಗರದ ಲಿಂಗಾಬುಧಿ ಕೆರೆಯಲ್ಲಿನ ಮೀನುಗಳ ಮರಣ ತಡೆಗಟ್ಟುವ ಸಂಬಂಧ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮೀನುಗಾರಿಕೆ ಇಲಾಖೆಯಲ್ಲಿರುವ ತಜ್ಞರು ಅಥವಾ ಇತರ ವೃತ್ತಿಪರರೊಂದಿಗೆ ಸಮಾಲೋಚನೆ ನಡೆಸಬೇಕು. ಆ ಮೂಲಕ ನಿರ್ವಹಣೆ ಕುರಿತು ಯೋಜನೆ ರೂಪಿಸಿ ಮೀನುಗಳ ಮರಣ ತಡೆಗಟ್ಟಬೇಕು. ಮೀನುಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಜಲ ಸಸ್ಯಗಳನ್ನು ಕೆರೆಯಲ್ಲಿ ಬೆಳೆಸಬೇಕು ಎಂದು ಸೂಚಿಸಿದರು.

ಕೆರೆಯ ಸುತ್ತಮುತ್ತಲು ಇರುವ ಬಡಾವಣೆಗಳಲ್ಲಿ ಎಸ್‌ಟಿಪಿಗಳು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದರ ಬಗ್ಗೆ ಮತ್ತು ರಾಜಕಾಲುವೆಯನ್ನು ಸ್ವಚ್ಛ ಮಾಡುವ ಕುರಿತು ಮೈಸೂರು ನಗರಾಭಿವೃಧ್ದಿ ಪ್ರಾಧಿಕಾರದವರು ಕ್ರಿಯಾ ಯೋಜನೆ ತಯಾರಿಸಿ ಕ್ರಮಕೈಗೊಳ್ಳಲು ಸೂಚಿಸಿದರು.