ಜಿಲ್ಲೆ

ತಡೆಗೋಡೆಯಿಲ್ಲದೆ ಅಪಘಾತವಾದ ಹಿನ್ನೆಲೆ ಬ್ಲ್ಯಾಕ್‌ಸ್ಪಾಟ್ ಗುರುತಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ

ಮಂಡ್ಯ: ಕಳೆದ ವಾರ ಪ್ರತ್ಯೇಕ ಪ್ರಕರಣದಲ್ಲಿ ನಾಲೆಗೆ ಕಾರು ಬಿದ್ದು ಐವರು ಮೃತಪಟ್ಟ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಿದೆ. ಮಾತ್ರವಲ್ಲದೆ ಏಳು ದಿನದೊಳಗೆ ಬ್ಲಾೃಕ್‌ಸ್ಪಾಟ್ ಗುರುತಿಸಿ ವರದಿ ನೀಡುವಂತೆ ನಾಲ್ಕು ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿಗೆ ಸೂಚನೆ ನೀಡಿದೆ.

ಈ ಕುರಿತು ಆ.1ರಂದು ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಮಂಡ್ಯ ತಾಲೂಕು ತಿಬ್ಬನಹಳ್ಳಿ ಸಮೀಪ ನಾಲೆಗೆ ಬಿದ್ದು ಒರ್ವ ಹಾಗೂ ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ಸಮೀಪ ತುರುಗನೂರು ಬ್ರಾೃಂಚ್‌ನ ಉಪನಾಲೆಗೆ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂತಹ ದುರ್ಘಟನೆ ಮರುಕಳಿಸುತ್ತಿದ್ದು, ತಡೆಗೋಡೆ ಇಲ್ಲದ ನಾಲೆ ಹಾಗೂ ಕೆರೆಗಳಿಂದ ಅಪಾಯಕಾರಿ ಸ್ಥಿತಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಾಲೆ, ಕೆರೆ ಬದಿ ತಡೆಗೋಡೆ/ಕ್ರಾಶ್ ಬಾರಿಯರ್ ನಿರ್ಮಿಸಲು ಸಮಿತಿ ರಚನೆ ಮಾಡಲಾಗಿದೆ ಎಂದಿದ್ದಾರೆ.

ಅದರಂತೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿ ನಾಲ್ಕು ವಿಭಾಗದಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. ಪ್ರತಿ ತಾಲೂಕಿಗೂ ನಾಲ್ವರು ಅಧಿಕಾರಿಗಳಿರುವ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಾರ್ಯದರ್ಶಿ ಉಳಿದವರು ಸದಸ್ಯರಾಗಿರುತ್ತಾರೆ. ಈ ಸಮಿತಿ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಬ್ಲಾೃಕ್‌ಸ್ಪಾಟ್ ಗುರುತಿಸಿ ವರದಿ ನೀಡಲಿದೆ. ಇದರೊಟ್ಟಿಗೆ ತಡೆಗೋಡೆ/ಕ್ರಾಶ್ ಬಾರಿಯರ್ ನಿರ್ವಹಣೆ ಹಾಗೂ ಪ್ರಸ್ತುತ ನಿರ್ಮಾಣ ಮಾಡಬೇಕಿರುವುದಕ್ಕೆ ಸಂಬಂಧಿಸಿದಂತೆ ಅತಿ ಅವಶ್ಯಕವಾಗಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸುವಂತೆ ಡಿಸಿ ಸೂಚನೆ ನೀಡಿದ್ದಾರೆ.