ಮೈಸೂರು: ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಾಲಯ ನೀಡುವ ರಾಷ್ಟ್ರೀಯ ಪಂಚಾಯತ್‌ರಾಜ್ ಪುರಸ್ಕಾರ ಪಡೆಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಸಜ್ಜಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಗಳು ಹಾಗೂ ವಿವಿಧ ಚಟುವಟಿಕೆಗಳನ್ನು ಸಮರ್ಪಕವಾಗಿ ದಾಖಲಿಸಿ (ಡಾಕ್ಯುಮೆಂಟೇಷನ್) ಸಂಬಂಧಿತ ಪೋರ್ಟಲ್‌ಗಳಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳು ರಾಷ್ಟ್ರೀಯ ಪಂಚಾಯತ್‌ರಾಜ್ ಪುರಸ್ಕಾರ ಪಡೆಯುವ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು. ಪುರಸ್ಕಾರಕ್ಕೆ ನಿಗದಿಪಡಿಸಿರುವ ಇಂಡೆಕ್ಸ್ ಮತ್ತು ಪ್ಯಾರಾಮೀಟರ್‌ಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು ಮತ್ತು ಚಟುವಟಿಕೆಗಳ ದಾಖಲೀಕರಣದ ಜತೆಗೆ ಡೇಟಾವನ್ನು ಕಾಲಕಾಲಕ್ಕೆ ನವೀಕರಿಸಬೇಕು ಎಂದರು.
ಹಿಂದಿನ ವರ್ಷಗಳಲ್ಲಿ ರಾಷ್ಟ್ರೀಯ ಪುರಸ್ಕಾರ ಪಡೆದ ಪಂಚಾಯಿತಿಗಳು ಅನುಸರಿಸಿದ ಕ್ರಮಗಳನ್ನು ಅಧ್ಯಯನ ಮಾಡಬೇಕು. ಹಿಂದಿನ ವರ್ಷಗಳ ಪ್ಯಾರಾಮೀಟರ್‌ಗಳು ಹಾಗೂ ಪ್ರಸಕ್ತ ಸಾಲಿನ ಪ್ಯಾರಾಮೀಟರ್‌ಗಳ ನಡುವಿನ ವ್ಯತ್ಯಾಸಗಳನ್ನು ಗಮನಿಸಿ, ಅದರಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಗಳ ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ಪ್ರಗತಿಯಲ್ಲಿ ಹಿಂದುಳಿದಿರುವ ಪಂಚಾಯಿತಿಗಳನ್ನು ಚುರುಕುಗೊಳಿ ಸಲು ಅನುಷ್ಠಾನಕ್ಕೆ ತಂದಿರುವ ಶ್ರೇಷ್ಠತೆ ಆ್ಯಪ್ ಸಹಕಾರಿಯಾಗಿದೆ. ಪಿಡಿಒಗಳು ಯಾವ ಅಂಶಗಳಲ್ಲಿ ಹಿಂದೆ ಬಿದ್ದಿದ್ದಾರೆ ಎಂಬುದನ್ನು ಗುರುತಿಸಿ ಸರಿಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತಿದೆ. ಹಿಂದುಳಿದಿರುವ ಗ್ರಾ.ಪಂ.ಗಳು ಮುಂದಿನ ಬಾರಿ ಉತ್ತಮ ರ‌್ಯಾಂಕಿಂಗ್ ಸಾಧಿಸಿದರೆ ಪುರಸ್ಕಾರ ಪಡೆಯುವ ಅವಕಾಶವೂ ಹೆಚ್ಚಲಿದೆ ಎಂದರು.
ಗ್ರಾಮೀಣಾಭಿವೃದ್ಧಿ ಪ್ರಗತಿಯಲ್ಲಿ ಮೈಸೂರು ಜಿಲ್ಲೆ ಸದ್ಯ ಎರಡನೇ ಸ್ಥಾನದಲ್ಲಿದೆ. ಪಿಡಿಒಗಳು ಉತ್ತಮ ಪ್ರಗತಿ ಸಾಧಿಸಿದಷ್ಟು ರಾಜ್ಯಮಟ್ಟದ ರ‌್ಯಾಂಕಿಂಗ್‌ನಲ್ಲಿ ಜಿಲ್ಲೆಯ ಸ್ಥಾನ ಮತ್ತಷ್ಟು ಸುಧಾರಿಸಲಿದೆ ಎಂದು ಹೇಳಿದರು.
ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯ ಸಮಾಲೋಚಕ ಡಾ.ಜಿ.ಎನ್. ಗಣೇಶ್ ಪ್ರಸಾದ್ ಮಾತನಾಡಿ, ಈ ಬಾರಿ ರಾಷ್ಟ್ರೀಯ ಪಂಚಾಯತ್‌ರಾಜ್ ಪುರಸ್ಕಾರಕ್ಕೆ ಸುಸ್ಥಿರ ಅಭಿವೃದ್ಧಿಯನ್ನು ಆಧಾರವಾಗಿಟ್ಟುಕೊಂಡು ಪಂಚಾಯಿತಿಗಳ ಕಾರ್ಯಕ್ಷಮತೆಯನ್ನು ಪರಿಗಣಿಸಲಾಗುತ್ತದೆ ಎಂದರು.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳು ಹಾಗೂ ತಾಲೂಕು ಪಂಚಾಯಿತಿಗಳಿಗೆ ಸಭೆಯಲ್ಲಿ ಪ್ರಶಂಸನಾ ಪತ್ರ ವಿತರಿಸಲಾಯಿತು.
ಜುಲೈನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ವಾಜಮಂಗಲ, ಎಂ.ಬಿ.ಹಳ್ಳಿ, ಹುಳಿಮಾವು, ಬಿ.ಶೆಟ್ಟಿಹಳ್ಳಿ ಹಾಗೂ ಹೊರಳವಾಡಿ ಗ್ರಾಮ ಪಂಚಾಯಿತಿಗಳಿಗೆ, ತಿ.ನರಸೀಪುರ, ನಂಜನಗೂಡು ಹಾಗೂ ಮೈಸೂರು ತಾಲೂಕು ಪಂಚಾಯಿತಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಆಗಸ್ಟ್‌ನಲ್ಲಿ ಸೋಮೇಶ್ವರಪುರ, ತಗಡೂರು, ಹೊಳೆಸಾಲು, ಬಾಚೇಗೌಡನಹಳ್ಳಿ ಹಾಗೂ ಹುಳಿಮಾವು ಗ್ರಾಮ ಪಂಚಾಯಿತಿಗಳಿಗೆ ಹಾಗೂ ತಿ.ನರಸೀಪುರ, ಪಿರಿಯಾಪಟ್ಟಣ ಮತ್ತು ಸಾಲಿಗ್ರಾಮ ತಾಲ್ಲೂಕು ಪಂಚಾಯಿತಿಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮೇಶ್ ಕೆ. ಲಾಳಿ ಉಪಸ್ಥಿತರಿದ್ದರು.