ಹಾನಗಲ್ಲ: ತಾಲೂಕಿನ ರೈತರು ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಲು ಆ. 14 ರವರೆಗೆ ಅವಕಾಶ ನೀಡಲಾಗಿದ್ದು, ಪಹಣಿ ಪತ್ರಿಕೆ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಜೆರಾಕ್ಸನೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ರೈತ ಸಂಘ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ರೈತರನ್ನೊಳಗೊಂಡು ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬೆಳೆ ಹಾನಿಯಾಗುವಷ್ಟು ಮಳೆ ಸುರಿದಿದ್ದರಿಂದ ರೈತರು ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಬೆಳೆ ಹಾನಿ ಪರಿಶೀಲನೆ ಅತ್ಯಗತ್ಯ ಎಂದರು.
ಕೃಷಿ ಸಹಾಯಕ ನಿರ್ದೇಶಕ ಮಾರುತಿ ಅಂಗರಗಟ್ಟಿ ಮಾತನಾಡಿ, ಜುಲೈ 31ರವರೆಗೆ ಬಿತ್ತನೆ ಅವಕಾಶವಿತ್ತು. ಹೀಗಾಗಿ ಬೆಳೆ ಹಾನಿ ಪರಿಶೀಲನೆಗೆ ತಾಂತ್ರಿಕ ಅಡಚಣೆಯಿತ್ತು. ಈಗ ಸರ್ವೆ ಕಾರ್ಯಕ್ಕೆ ಮುಂದಾಗುತ್ತೇವೆ. ಬೆಳೆ ಹಾನಿಯಾದ ರೈತರು ಬಮ್ಮನಹಳ್ಳಿ, ಅಕ್ಕಿಆಲೂರು, ಹಾನಗಲ್ಲ ಹೋಬಳಿಯಲ್ಲಿ ತಮಗೆ ಸಂಬಂಧಿಸಿದ ಹೋಬಳಿಯಲ್ಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅವಧಿ ಮುಗಿದ ತಕ್ಷಣ ವಿಳಂಬವಿಲ್ಲದೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರೈತ ಸಂಘದ ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಹಾನಗಲ್ಲ ತಾಲೂಕಿಗೆ ಅತೀ ಕಡಿಮೆ ಯೂರಿಯಾ ಪೂರೈಕೆಯಾಗಿದೆ. ಕಳೆದ ವರ್ಷದ ಬೆಳೆ ವಿಮೆ ಬಾಕಿ ಉಳಿದಿದೆ. ಬೆಳೆ ಮಿಸ್ವ್ಯಾಚ್ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಅಧಿಕಾರಿಗಳು ಸರಿಪಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರಾದ ಅಡವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ, ಮಹಲಿಂಗಪ್ಪ ಅಕ್ಕಿವಳ್ಳಿ, ಶ್ರೀಧರ ಮಲಗುಂದ, ಮಹೇಶ ಕೊಂಡೋಜಿ, ರಾಜೀವ ದಾನಪ್ಪನವರ, ಗಿರೀಶ ಹಿರೇಮಠ, ಅಜ್ಜನಗೌಡ ಕರೇಗೌಡ್ರ, ರಾಜೇಂದ್ರಪ್ಪ ಗಾಳಪೂಜಿ, ಶಿವನಗೌಡ ಉದ್ದೇಗೌಡ್ರ, ರಮೇಶ ಕಳಸೂರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಾದ ಸಂಗಮೇಶ ಹಕ್ಲಪ್ಪನವರ, ಎಚ್. ಸಂತೋಷ, ಕಂದಾಯ ಇಲಾಖೆ ಶಿರಸ್ತೇದಾರ ಟಿ.ಕೆ. ಕಾಂಬಳೆ, ತೋಟಗಾರಿಕೆ ಇಲಾಖೆ ಅಧಿಕಾರಿ ಭರಮಪ್ಪ ನೇಗಿನಹಾಳ ಇತರರಿದ್ದರು.