ಜಿಲ್ಲೆ

ಸೂಕ್ಷ್ಮ ಮತಗಟ್ಟೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ

ಆರ್.ತುಳಸಿಕುಮಾರ್

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಬರುವ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಕಟ್ಟೆಚ್ಚರವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲ ಮೈಕ್ರೊ ಅಬ್ಸರ್ವರ್ಸ್‌ಗಳಿಗೆ ಸೂಚನೆ ನೀಡಿದರು.

ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಶನಿವಾರ ಮೈಕ್ರೋ ಅಬ್ಸರ್ವರ್ಸ್‌ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಮೈಕ್ರೊ ಅಬ್ಸರ್ವರ್ಸ್‌ಗಳು ಮತದಾನ ದಿನ ತಮಗೆ ನಿಯೋಜಿಸಿರುವ ಮತಗಟ್ಟೆಗಳಲ್ಲಿ ಸಮರ್ಪಕವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.

ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 24 ವಿಧಾನಸಭಾ ಕ್ಷೇತ್ರಗಳು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕ್ರಮವಾಗಿ ಒಂದು ಮತ್ತು 3 ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ 305 ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳಿದ್ದು, 365 ಮೈಕ್ರೋ ಅಬ್ಸರ್ವರ್ಸ್‌ಗಳನ್ನು ನಿಯೋಜಿಸಲಾಗಿದೆ. ಮತದಾನದ ದಿನ ಮತಗಟ್ಟೆಗಳ ಬಳಿ ನಡೆಯುವ ಪ್ರಕ್ರಿಯೆಗಳ ಮೇಲೆ ಸರಿಯಾಗಿ ನಿಗಾ ವಹಿಸಬೇಕು. ಮತದಾನ ಮುಗಿದ ಬಳಿಕ ಆ ಮತಗಟ್ಟೆಯಲ್ಲಿ ನಡೆದ ಕಾರ್ಯಚಟುವಟಿಕೆಗಳ ಕುರಿತು ಸಾಮಾನ್ಯ ವಿಕ್ಷಕರಿಗೆ ವರದಿ ನೀಡಬೇಕು ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಚುನಾವಣಾ (ಸಾಮಾನ್ಯ) ವೀಕ್ಷಕರಾದ ಗಾಯತ್ರಿ ರಾಥೋರ್, ವಾಣಿ ಮೋಹನ್, ನ್ಯಾಲಿ ಇಟೆ, ಪಾಲಿಕೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್.ಕಾಂತರಾಜು, ಮಾನವ ಸಂಪನ್ಮೂಲ ನೋಡಲ್ ಅಧಿಕಾರಿ ಅಶೋಕ್, ತರಬೇತಿ ನೋಡಲ್ ಅಧಿಕಾರಿ ಜಗದೀಶ್ ಸೇರಿ ಇನ್ನಿತರರು ಹಾಜರಿದ್ದರು.

ಮತದಾನದ ದಿನ ಮೈಕ್ರೋ ಅಬ್ಸರ್ವರ್ಸ್‌ಗಳ ಕೆಲಸ ಪ್ರಮುಖ ಪಾತ್ರ ವಹಿಸಲಿದೆ. ಬೆಳಗ್ಗೆ ನಡೆಯುವ ಮಾಕ್ ಪೋಲ್ ಪ್ರಕ್ರಿಯೆಯಿಂದ ಹಿಡಿದು ಸಂಜೆ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಮತಗಟ್ಟೆಗಳಲ್ಲಿ ನಡೆಯುವ ಚಲನವಲಗಳ ಮೇಲೆ ನಿಗಾ ವಹಿಸಲಿದ್ದಾರೆ.

- ಮಕರಂದ್ ಪಾಂಡುರಂಗ್, ಬೆಂ. ದಕ್ಷಿಣ ಕ್ಷೇತ್ರದ ಸಾಮಾನ್ಯ ವೀಕ್ಷಕ