ಬೆಂಗಳೂರು: ಮೂಲಸೌಕರ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ನೀಡದ ಖಾಸಗಿ ಲೇಔಟ್‌ಗಳ ಡೆವಲಪರ್‌ಗಳಿಗೆ ನೋಟೀಸ್ ಜಾರಿ ಮಾಡುವಂತೆಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬ್ಯಾಟರಾಯನಪುರ ಮತಕ್ಷೇತ್ರದ ರಾಚೇನಹಳ್ಳಿ ಕೆರೆಯ ಬಳಿ ಸೋಮವಾರ ರಾಜಕಾಲುವೆ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಖಾಸಗಿ ಲೇಔಟ್‌ಗಳಲ್ಲಿ ನೀರು ಹರಿಯಲು ಸೂಕ್ತ ವ್ಯವಸ್ಥೆ ರೂಪಿಸದ ಕಾರಣ ಮನೆಗಳಿಗೆ ನೀರು ನುಗ್ಗುವ ಪ್ರಕರಣಗಳು ನಡೆಯುತ್ತಿವೆ. ಮಳೆ ನೀರು ಹಾಗೂ ಕೊಳಚೆ ನೀರನ್ನು ಒಟ್ಟಿಗೆ ಬಿಟ್ಟಿರುವ ಕಾರಣಕ್ಕೂ ಸಮಸ್ಯೆಗಳು ಉಂಟಾಗುತ್ತಿವೆ. ಲೇಔಟ್ ರೂಪಿಸುವಾಗ ಸೂಕ್ತ ವ್ಯವಸ್ಥೆ ಮಾಡದಿರುವುದು ಡೆವಲಪರ್‌ಗಳ ತಪ್ಪು. ಜನರಿಂದ ಹಣ ಪಡೆದು ಮಳೆನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದಿರುವ ಕಾರಣಕ್ಕೆ ಜನ ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಡೆವಲಪರ್‌ಗಳಿಂದ ಆಗಿರುವ ತೊಂದರೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಎಲ್ಲೆಲ್ಲಿ ಖಾಸಗಿ ಲೇಔಟ್‌ನವರು ಒತ್ತುವರಿ ಮಾಡಿದ್ದಾರೋ ಅಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಎಸ್‌ಟಿಪಿ ಅಳವಡಿಕೆ ಮಾಡದವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಪ್ರತಿ ವರ್ಷ ಎಲ್ಲೆಲ್ಲಿ ಮಳೆಯಿಂದ ತೊಂದರೆ ಆಗುತ್ತದೆಯೋ ಆ ಪ್ರದೇಶಗಳನ್ನು ಗುರುತಿಸಿ ಹಂತ, ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಮಳೆಹಾನಿ ಸ್ಥಳಕ್ಕೆ ಭೇಟಿ, ಪರಿಶೀಲನೆ:
ಮಳೆಗಾಲ ಆರಂಭದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸ್ಥಳಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಯಲಹಂಕದ ರಮಣಶ್ರೀ ಗಾರ್ಡೇನಿಯಾ ಲೇಔಟ್‌ಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಜತೆ ಚರ್ಚೆ ನಡೆಸಿದರು. ಕಳೆದೆರಡು ವರ್ಷಗಳ ಹಿಂದೆ ಈ ಭಾಗದಲ್ಲಿ ಕಾಲುವೆ ಇರಲಿಲ್ಲ. ಪಾಲಿಕೆ ವತಿಯಿಂದ ಕಾಲುವೆ ನಿರ್ಮಿಸಿ ಅದನ್ನು ಮುಂದೆ ತೆಗೆದುಕೊಂಡು ಹೋಗದೆ ಇಲ್ಲಿಗೆ ನಿಲ್ಲಿಸಿದ್ದಾರೆ. ಇದರಿಂದಾಗಿ ಸಣ್ಣ ಮಳೆಗೆ ಮನೆಗಳ ಒಳಗೆ ನೀರು ನುಗ್ಗಿದೆ. ಈ ಕಾಲುವೆ ಮುಂದೆ ವಿಸ್ತರಿಸಿ ಮಳೆ ನೀರು ಕಾಲುವೆ ಹಾಗು ಚರಂಡಿಯನ್ನು ಪ್ರತ್ಯೇಕವಾಗಿ ಮಾಡಲಾಗುವುದು ಎಂದರು.
ಆ ಬಳಿಕ ಡಿಸಿಎಂ ರಾಚೇನಹಳ್ಳಿ ಕೆರೆ ಪಕ್ಕದಲ್ಲಿರುವ ಜವಾಹರ್‌ಲಾಲ್ ನೆಹರೂ ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಹಾದುಹೋಗಿರುವ ರಾಜಕಾಲುವೆ ಪರಿಶೀಲನೆ ನಡೆಸಿದರು. ಈ ರಾಜಕಾಲುವೆ ತಡೆಗೋಡೆ ಎತ್ತರ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಮುಂದಿನ ತಿಂಗಳೊಳಗಾಗಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಡಿಸಿಎಂ ಗೆದ್ದಲಹಳ್ಳಿ ಬಳಿ ರಾಜಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಥಳೀಯ ನಿವಾಸಿಗಳು, ಪ್ರತಿ ಬಾರಿ ಮಳೆ ಬಂದರೂ ಇಲ್ಲಿ ಮನೆಯೊಳಗೆ ನೀರು ನುಗ್ಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಶೀಘ್ರವೇ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಕೈ ಡೆಕ್ ನಿರ್ಮಾಣಕ್ಕೆ ಶೀಘ್ರ ಟೆಂಡರ್:
ಬೆಂಗಳೂರಿಗೆ ಒಂದು ಒಳ್ಳೆಯ ಪ್ರವಾಸಿ ಕೇಂದ್ರ ಬೇಕು ಎನ್ನುವ ಆಲೋಚನೆ ನಮ್ಮಲಿದೆ. ಹಾಗಾಗಿ ಸ್ಕೈ ಡೆಕ್ ನಿರ್ಮಾಣದ ಬಗ್ಗೆ ಅಧಿಕಾರಿಗಳು ಯೋಜನಾ ವರದಿ ನೀಡಿದ್ದಾರೆ. ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದ್ದು, ಪಾರ್ಕಿಂಗ್, ಜಾಗದ ಲಭ್ಯತೆ ಮತ್ತಿತರ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು.
ಇನ್ನು ಮುಂದೆ ಬೆಂಗಳೂರಿನ ಯಾವುದೇ ಕೆರೆಗಳಿಗೆ ಕೊಳಚೆ ನೀರು ಹರಿಸುವುದಿಲ್ಲ. ಸಂಸ್ಕರಿಸಿದ ನೀರನ್ನು ಮಾತ್ರ ಬಿಡಲಾಗುವುದು. ಈ ಬಾರಿ 7 ಸಾವಿರ ಕೊಳವೆ ಬಾವಿ ಬತ್ತಿದ ಪರಿಣಾಮ ನೀರಿನ ಸಮಸ್ಯೆ ಎದುರಾಗಿದ್ದು, ಮುಂದೆ ಇಂತಹ ಸಮಸ್ಯೆ ಬಾರದಂತೆ ಎಚ್ಚರ ವಹಿಸಲಾಗುವುದು.
- ಡಿ.ಕೆ. ಶಿವಕುಮಾರ್, ಡಿಸಿಎಂ