ಜಿಲ್ಲೆ

ಮುನ್ನೆಚ್ಚರಿಕೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಸತತ ಮಳೆಯಿಂದ ಪ್ರವಾಹದ ಮುನ್ಸೂಚನೆ ಇದ್ದು, ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ಈ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಜಿಲ್ಲೆಯ ಎಲ್ಲ ತಾಲೂಕು ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಸ್ವರೂಪ ಟಿ.ಕೆ ಸೂಚಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ 24 ಗಂಟೆಗೆ ಅವಧಿಯಲ್ಲಿ ಸಾಮಾನ್ಯ ಮಳೆ 4.4 ಮೀಮೀ ಬದಲಾಗಿ 26.8 ಮೀಮೀ ಮಳೆಯಾಗಿದೆ. ಅಣ್ಣಿಗೇರಿ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಹವಾಮಾನ ಇಲಾಖೆ ಪ್ರಕಾರ ಮುಂದಿನ 4 ದಿನ ಅತಿಯಾದ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಅಗತ್ಯ ಕ್ರಮ ವಹಿಸಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಪೂರ್ವಾನುಮತಿ ಪಡೆದು ರಜೆ ಪಡೆಯಬೇಕು ಎಂದು ತಿಳಿಸಿದ್ದಾರೆ.
ಸತತ ಮಳೆಯಿಂದ ನೆರೆ ಹಾವಳಿ, ಜನ-ಜಾನವಾರು ಜೀವಹಾನಿ, ರಸ್ತೆ ಹಾನಿ, ಸೇತುವೆ ಹಾನಿ, ಸಾರ್ವಜನಿಕ ಆಸ್ತಿ ಹಾನಿಗಳಿಂದ ನಾಗರಿಕ ಮೂಲಭೂತ ಸೌಕರ್ಯಕ್ಕೆ ತೊಂದರೆ ಉಂಟಾಗದಂತೆ ಕ್ರಮ ವಹಿಸಬೇಕು. ಮಳೆಯಿಂದ ತೊಂದರೆಗೆ ಒಳಗಾಗುವ ಜನರ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಆಡಳಿತ ಕಚೇರಿಗಳಲ್ಲಿ ದಿನದ 24 ಗಂಟೆ ಲಭ್ಯವಿರುವ ನಿರಂತರ ಸಹಾಯವಾಣಿ ಆರಂಭಿಸಿದೆ. ಜಿಲ್ಲೆಯ ಜನರು ತುರ್ತು ಸಂದರ್ಭದಲ್ಲಿ ಸಂಪಕಿರ್ಸಬಹುದು.
ಮಳೆ ಹಾನಿ ವಿವರ: ಬುಧವಾರ ಹಾಗೂ ಗುರುವಾರ ಬೆಳಗ್ಗೆವರೆಗಿನ ಮಳೆಯಿಂದ ಯಾವುದೇ ಜೀವ ಹಾನಿಯಾಗಿಲ್ಲ. ತಾಲೂಕಿನ ಯರಿಕೊಪ್ಪ ಗ್ರಾಮದಲ್ಲಿ ಒಂದು ಮನೆಗೆ ಪೂರ್ಣ ಹಾನಿಯಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಧಾರವಾಡ ನಗರದಲ್ಲಿ ಮನೆಯೊಳಗೆ ನೀರು ನುಗ್ಗಿರುವ ವರದಿಯಾಗಿದೆ. ತಾಲೂಕಿನಲ್ಲಿ 10 ಮನೆಗಳು ಭಾಗಶಃ ಹಾನಿ ಆಗಿವೆ. ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಸಣ್ಣ ಜಾನುವಾರು (ಆಡು) ಜೀವ ಹಾನಿ ಆಗಿದೆ. ಕಲಘಟಗಿಯಲ್ಲಿ ಒಂದು ಮನೆ ಹಾಗೂ ಕುಂದಗೋಳ ತಾಲ್ಲೂಕಿನಲ್ಲಿ 4 ಮನೆಗಳು, ನವಲಗುಂದದಲ್ಲಿ 3 ತೀವ್ರತರ ಹಾಗೂ 6 ಭಾಗಶಃ ಮನೆಗಳು ಹಾನಿಯಾಗಿವೆ. ಹುಬ್ಬಳ್ಳಿ ನಗರದಲ್ಲಿ ಎರಡು ಮನೆಗಳು ಭಾಗಶಃ ಹಾನಿಯಾಗಿವೆ. ಅಳ್ನಾವರ, ಹುಬ್ಬಳ್ಳಿ, ಅಣ್ಣಿಗೇರಿ ತಾಲೂಕುಗಳಲ್ಲಿ ಯಾವುದೇ ಹಾನಿಯಾಗಿಲ್ಲ.