ಜಿಲ್ಲೆ

ನಗರ ಪುನರ್ವಸತಿ ಕಾರ್ಯಕರ್ತರಿಗೆ ಸ್ಥಳ ನಿಯೋಜಿಸಲು ಸೂಚನೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಖಾಲಿಯಿರುವ ನಗರ ಪುನರ್ವಸತಿ ಕಾರ್ಯಕರ್ತರಿಗೆ ಸ್ಥಳ ನಿಯೋಜಿಸುವಂತೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಂಗವಿಕರಲ ಸಬಲೀಕರಣಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳ ಅನುಷ್ಠಾನ, ನಗರ ಪುನರ್ವಸತಿ ಕಾರ್ಯಕರ್ತರ ನಿಯೋಜನೆಗೆ ಸಂಬಂಧಿಸಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಸಭೆ ಉದ್ದೇಶಿಸಿ ಮಾತನಾಡಿದರು.

ಎಲ್ಲ 8 ವಲಯಗಳಗಳಲ್ಲಿನ ವಾರ್ಡ್‌ಗಳಲ್ಲಿ ನಗರ ಪುನರ್ವಸತಿ ಕಾರ್ಯಕರ್ತರ (ವಿಆರ್‌ಡಬ್ಲ್ಯು) ನೇಮಕ ಮಾಡಿಕೊಳ್ಳಬೇಕು. ನಂತರ ಅಂಗವಿಕಲರ ವರ್ಗದವರನ್ನು ಸರ್ವೆ ಮಾಡಿ ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯ ಪಡೆದುಕೊಳ್ಳುವಂತೆ ಮನವರಿಕೆ ಮಾಡಬೇಕು. ಯಾವೆಲ್ಲಾ ಯೋಜನೆಗಳಿವೆ ಎಂಬುದರ ಕುರಿತು ಸರಿಯಾದ ಮಾಹಿತಿ ನೀಡಿ ಅಂತಹ ಯೋಜನೆಗಳೆಲ್ಲವೂ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕೆಂದು ಸೂಚಿಸಿದರು.

ವಿಆರ್‌ಡಬ್ಲ್ಯುಗಳ ಕಾರ್ಯವೈಖರಿ:

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಗರ ಪುನರ್ವಸತಿ ಕಾರ್ಯಕರ್ತರುಗಳನ್ನು ಮಾಸಿಕ ಗೌರವಧನದ ಆಧಾರ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ವಿವಿಧ ಷರತ್ತು ಆಧಾರದ ಮೇಲೆ ನೇಮಕಗೊಂಡ ಬಳಿಕ, ಅವರನ್ನು ಪಾಲಿಕೆಯ ವಾರ್ಡ್‌ಗಳಲ್ಲಿ ನಿಯೋಜಿಸಿ, ಅವರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಕಲ್ಯಾಣ ವಿಭಾಗದಿಂದ ಸಿಗುವ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ ಅವು ಕೈಗೆಟಕುವಂತೆ ಮಾಡಲಿದ್ದಾರೆ ಎಂದು ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.