ಹುಬ್ಬಳ್ಳಿ: ಗ್ರಾಮೀಣ ಭಾಗದಲ್ಲಿ ಸಾರಿಗೆ ಸಂಸ್ಥೆಯು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಜನಪ್ರತಿನಿಧಿಗಳು ಕರೆದ ಸಭೆಗೂ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ನವಲಗುಂದ, ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ವಿಭಾಗದ ಡಿಪೋ ಮ್ಯಾನೇಜರ್ಗಳನ್ನು ಅಮಾನತುಗೊಳಿಸುವಂತೆ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಶಿಫಾರಸು ಮಾಡಿದರು.
ನಗರದ ಮಿನಿವಿಧಾನಸೌಧದ ತಾಲೂಕು ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಈ ನಿರ್ಧಾರ ಕೈಗೊಂಡರು.
ಆರಂಭದಲ್ಲಿಯೇ ಶಾಸಕ ಕೋನರಡ್ಡಿ, ಅಧಿಕಾರಿಗಳ ಬೆವರಿಳಿಸಿದರು. ಯಾವೊಂದು ಮಾಹಿತಿ ಗೊತ್ತಿಲ್ಲದವರು ಸಭೆಗೆ ಹಾಜರಾಗಬೇಡಿ. ನಿಮ್ಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಭೆಗೆ ಕರೆತನ್ನಿ. ಕಾಟಾಚಾರದ ಸಭೆ ಎಂದು ಭಾವಿಸಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದರು. ಪ್ರತಿಯೊಂದು ಇಲಾಖೆಯ ಪ್ರತ್ಯೇಕ ಸಭೆ ನಡೆಸಲಾಗುವುದು. ತಾವೆಲ್ಲರೂ ಆಗಮಿಸಿ ಸಮರ್ಪಕ ಮಾಹಿತಿ ಕೊಡಬೇಕು ಎಂದು ಸೂಚಿಸಿದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಕಳೆದ ಬಾರಿ ನಡೆದ ಕಾಮಗಾರಿಗಳ ಸಮರ್ಪಕ ಮಾಹಿತಿ ಪೂರೈಸಬೇಕು. ಮಳೆಗಾಲ ಬರುತ್ತಿದೆ. ಈಗ ಕಾಮಗಾರಿ ನಡೆಸುವುದಕ್ಕಿಂತ ಕ್ರಿಯಾಯೋಜನೆ ಸಿದ್ಧಪಡಿಸಿ ಕೊಡಿ. ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗುವುದು. ನಂತರ ವಿವಿಧ ಕಾಮಗಾರಿಗಳನ್ನು ಆರಂಭಿಸೋಣ. ತುರ್ತಾಗಿ ಯಾವ ಯೋಜನೆಗಳನ್ನು ಮಾಡಬೇಕೆಂಬುದರ ಬಗ್ಗೆ ಪಟ್ಟಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ರಾಯನಾಳ ಕೆರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ಗಳಿಂದ ಚರಂಡಿ ನೀರು ಸೇರುತ್ತಿದೆ. ಈಗಾಗಲೇ ಮೇಯರ್ ಮತ್ತು ಆಯುಕ್ತರ ಜತೆಗೆ ಚರ್ಚೆ ಮಾಡಿದ್ದೇನೆ. ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಯೋಜನೆ ರೂಪಿಸಬೇಕೆಂದು ಹೇಳಿದ್ದೇನೆ. ಇದಕ್ಕೆ ನಿಮ್ಮ ಸಲಹೆಯನ್ನೂ ಕೊಡಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಉಪವಿಭಾಗಾಧಿಕಾರಿ ಅಶೋಕ ತೇಲಿ ಮಾತನಾಡಿ, ಕೆಡಿಪಿ ಸಭೆ ಇದೆ ಎಂದಾಗ ಎಲ್ಲರೂ ಸಮರ್ಪಕ ಮಾಹಿತಿಯನ್ನು ತರಬೇಕು. ಕಾಟಾಚಾರಕ್ಕೆ ಬಂದು ಹೋಗಬಾರದು. ಶಾಸಕರು ನೀಡಿದ ಸೂಚನೆಯನ್ನು ಶ್ರದ್ಧೆಯಿಂದ ಪಾಲಿಸಬೇಕು ಎಂದರು.
ತಹಸೀಲ್ದಾರ್ಗಳಾದ ಪ್ರಕಾಶ ನಾಶಿ, ಕಲಗೌಡ ಪಾಟೀಲ, ತಾಪಂ ಇಒ ಗಂಗಾಧರ ಕಂದಕೂರ, ಎಡಿ ಸದಾನಂದ ಅಮರಾವತಿ, ಸಿಪಿಐ ಮುರುಗೇಶ ಚನ್ನಣ್ಣವರ ಇತರರು ಇದ್ದರು.
ತಾಸು ತಡವಾಗಿ ಸಭೆ ಆರಂಭ
ಬೆಳಗ್ಗೆ 11.30ಕ್ಕೆ ಕೆಡಿಪಿ ಸಭೆ ನಿಗದಿ ಮಾಡಲಾಗಿತ್ತು. ಅಧಿಕಾರಿಗಳೆಲ್ಲ ಬಂದು ಸೇರಿದ್ದರು. ಆದರೆ, ಶಾಸಕರಿಬ್ಬರು ತಡವಾಗಿ ಆಗಮಿಸಿದ್ದರಿಂದ ಸಭೆ ಒಂದು ತಾಸಿನ ನಂತರ ಆರಂಭವಾಯಿತು.