ಹಾವೇರಿ: ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೆ.ಜಿ. ಚಂಗಪ್ಪ ಗುರುವಾರ ಜಿಲ್ಲೆಯ ವಿವಿಧ ವಿದ್ಯಾರ್ಥಿ ವಸತಿ ನಿಲಯ, ಆಸ್ಪತ್ರೆ ಹಾಗೂ ಹಾವೇರಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ರಾಣೆಬೆನ್ನೂರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ, ರೋಗಿಗಳಿಗೆ ಒದಗಿಸುವ ಸೌಲಭ್ಯಗಳು, ಸ್ವಚ್ಛತೆ ಕುರಿತಂತೆ ಪರಿಶೀಲನೆ ನಡೆಸಿದರು. ಈ ವೇಳೆ ಚಿಕಿತ್ಸೆಗೆಂದು ದಾಖಲಾಗಿರುವ ರೋಗಿಗಳಿಂದ ಮಾಹಿತಿ ಪಡೆದರು.
ನಂತರ ಹಾವೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಭೇಟಿ ನೀಡಿ ವಾರ್ಡನ್ಗಳಿಂದ ಮಾಹಿತಿ ಪಡೆದರು. ವಸತಿ ನಿಲಯಗಳ ಅಡುಗೆ ಕೋಣೆ, ಶೌಚಗೃಹಗಳ ಸ್ವಚ್ಛತೆ, ವಿದ್ಯಾರ್ಥಿಗಳ ಕೊಠಡಿಗಳಿಗೆ ತೆರಳಿ ಹಾಸಿಗೆ, ಹೊದಿಕೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಗ್ರಂಥಾಲಯ ವ್ಯವಸ್ಥೆ, ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಹಾಗೂ ರಕ್ಷಣಾ ನೆರವು ವಿಚಾರಿಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಚಂಗಪ್ಪ, ಸೌಲಭ್ಯಗಳಲ್ಲಿ ಕೊರತೆ ಅಥವಾ ಯಾವುದಾದರೂ ನ್ಯೂನ್ಯತೆಗಳಿದ್ದರೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಿದರು. ಆದರೆ, ವಿದ್ಯಾರ್ಥಿಗಳು ಎಲ್ಲವೂ ಸರಿಯಾಗಿದೆ ಎಂಬ ಸಿದ್ಧ ಉತ್ತರ ನೀಡಿದರು.
ವಿದ್ಯಾರ್ಥಿಗಳು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ, ಪೊಲೀಸ್ ನೆರವು ಪಡೆಯಲು ಅನುಕೂಲವಾಗುವಂತೆ ಸಹಾಯವಾಣಿಗಳ ಸಂಖ್ಯೆಗಳನ್ನು ಪ್ರದರ್ಶಿಸುವಂತೆ ವಾರ್ಡ್ನ್ಗಳಿಗೆ ನಿರ್ದೇಶನ ನೀಡಿದರು. ಹಾಸಿಗೆ, ಹೊದಿಕೆಯ ಬದಲಾವಣೆ, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಹಾವೇರಿ ತಹಸೀಲ್ದಾರ್ ಶಂಕರ ಜಿ.ಎಸ್., ರಾಣೆಬೆನ್ನೂರ ತಹಸೀಲ್ದಾರ್ ಬಸವನಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಚೈತ್ರಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ. ರಾಜು ಕೂಲೇರ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಗುಡ್ಡಪ್ಪ, ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ವಿದ್ಯಾರ್ಥಿ ನಿಲಯಗಳ ವಾರ್ಡ್ನ್ಗಳು ಉಪಸ್ಥಿತರಿದ್ದರು.