ಜಿಲ್ಲೆ

ಜಯನಗರ ಕಾಂಪ್ಲೆಕ್ಸ್ ಒತ್ತುವರಿ ತೆರವುಗೊಳಿಸಲು ಪಾಲಿಕೆ ಮುಖ್ಯ ಆಯುಕ್ತರ ಸೂಚನೆ

ಬೆಂಗಳೂರು: ಜಯನಗರ ವಾಣಿಜ್ಯ ಸಂಕೀರ್ಣದ ಒಳ ಭಾಗದಲ್ಲಿ ವ್ಯಾಪಾರ ನಡೆಸುತ್ತಿರುವ ಮಳಿಗೆದಾರರು ಅನಧಿಕೃತವಾಗಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕಾರಣ ಕೂಡಲೇ ಒತ್ತುವರಿಯನ್ನು ತೆರವುಗೊಳಿಸುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಳೀಯ ಶಾಸಕ ಸಿ.ಕೆ.ರಾಮಮೂರ್ತಿ ಅವರೊಂದಿಗೆ ಮಂಗಳವಾರ ಜಯನಗರ ವಾಣಿಜ್ಯ ಸಂಕೀರ್ಣ ಹಾಗೂ ಕಾಂಪ್ಲೆಕ್ಸ್‌ಗೆ ಹೊಂದಿಕೊಂಡಂತಿರುವ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿದ ವೇಳೆ ಒತ್ತುವರಿ ಕುರಿತು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಶಾಸಕರು ಕೂಡ ಒತ್ತುವರಿ ತೆರವು ಮಾಡುವಂತೆ ನಮ್ಮ ಮೇಲೆ ಒತ್ತಡ ಬರುತ್ತಿದ್ದು, ಈ ಬಗ್ಗೆ ಬಿಬಿಎಂಪಿ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ವಿನಂತಿಸಿದರು. ಈ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತರು ಒತ್ತುವರಿ ಆಗಿರುವುದನ್ನು ದೃಢಪಡಿಸಿಕೊಂಡು ತೆರವುಗೊಳಿಸಲು ಸ್ಥಳದಲ್ಲೇ ಸೂಚಿಸಿದರು.

ಫುಟ್‌ಪಾತ್ ಒತ್ತುವರಿ ಕುರಿತು ನಾಗರಿಕರಿಂದ ಪದೇ ಪದೆ ದೂರುಗಳು ಕೇಳಿಬರುತ್ತಿದೆ. ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ನೀಡುವುದನ್ನು ಸಹಿಸುವುದಿಲ್ಲ. ಈ ಬಗ್ಗೆ ಖುದ್ದು ಪರಿಶೀಲನೆ ವೇಳೆ ಒತ್ತುವರಿ ಪ್ರಕರಣ ನಡೆದಿರುವುದು ದೃಢಪಟ್ಟಿದೆ. ಇವುಗಳನ್ನು ತೆರವುಗೊಳಿಸುವ ಜತೆಗೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮಳಿಗೆಗಳನ್ನೂ ತೆರವು ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.

ವರದಿ ಸಲ್ಲಿಸಲು ಸೂಚನೆ:

ಕಾಂಪ್ಲೆಕ್ಸ್ ಬಳಿ ನಿರ್ಮಿಸಬೇಕಿರುವ ಬ್ಲಾಕ್-2, 3 ಹಾಗೂ 4ನೇ ಕಟ್ಟಡದ ಸ್ಥಳವನ್ನು ಕೂಡ ಮುಖ್ಯ ಆಯುಕ್ತರು ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿ ಆರಂಭವಾಗದ ಹಿನ್ನಲೆಯಲ್ಲಿ ಬಿಡಿಎ ಜತೆ ಸಮಾಲೋಚನೆ ನಡೆಸಿ ಕೈಗೊಂಡು ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.