ಜಿಲ್ಲೆ

ತಪಾಸಣೆ ನಡೆಸಿ 19 ಮಾರಾಟ ಮಳಿಗೆಗಳಿಗೆ ನೋಟೀಸ್ ಜಾರಿ

ರಮೇಶ ಮೇಳಕುಂದಾ

ಕಲಬುರಗಿ: ಪ್ರಸಕ್ತ 2025-26 ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಪ್ರಾರಂಭ ಹಂತದಲ್ಲಿದ್ದು, ಈಗಾಗಲೆ ಜೇವರ್ಗಿ ತಾಲ್ಲೂಕಿನಾದ್ಯಾಂತ 25 ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ತಪಾಸಣೆ ನಡೆಸಿ 19 ಮಾರಾಟ ಮಳಿಗೆಗಳಿಗೆ ನೊಟೀಸ್ ಜಾರಿಗೆ ಮಾಡಲಾಗಿದ್ದು, 13 ಮಾರಾಟ ಮಳಿಗೆಗಳಿಗೆ ದಾಸ್ತಾನು ಮಾರಾಟ ತಡೆ ಆದೇಶ ನೀಡಲಾಗಿದೆ ಎಂದು ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಅನಧಿಕೃತವಾಗಿ ಹತ್ತಿ ಬೀಜ ಮಾರಾಟ ಮಾಡುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಇತ್ತೀಚೆಗೆ ಜೇವರ್ಗಿ ನಗರದ ಅನ್ನದಾತ ಆಗ್ರೋ ಇಂಡಸ್ಟ್ರೀಜ್ ಮಳಿಗೆಗೆ ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕರು, ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಜಾಗೃತ ಕೋಶದ ಸಹಾಯಕ ಕೃಷಿ ನಿರ್ದೇಶಕರು ಹಾಗೂ ತಾಲ್ಲೂಕಿನ ಕೃಷಿ ಅಧಿಕಾರಿಗಳ ಜಂಟಿಯಾಗಿ ಭೇಟಿ ನೀಡಿದಾಗ ಪರವಾನಿಗೆ ಇಲ್ಲದೆ ಹತ್ತಿ ಬೀಜ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ 174 ಪಾಕೀಟ ಹತ್ತಿ ಬೀಜಗಳನ್ನು ಜಪ್ತಿ ಮಾಡಿ, ಹತ್ತಿ ಬೀಜ ಮಾದರಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಇದಲ್ಲದೆ ಜೇವರ್ಗಿ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಕಾನೂನು ಬದ್ದವಾಗಿ ವಿವಿಧ ಕೃಷಿ ಪರಿಕರಗಳನ್ನು ಮಾರಾಟ ಮಾಡಲು ಸೂಚಿಸಲಾಗಿದ್ದು, ಇದಕ್ಕೆ ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರು ತಿಳಿಸಿದ್ದಾರೆ.