ಜಿಲ್ಲೆ

ಸಮಾಜದಲ್ಲಿ ಶಾಂತಿ ಕದಡುವ ಯತ್ನ, ಶಾಸಕ ಯತ್ನಾಳ-ವಕೀಲ ಖಾದ್ರಿಗೆ ನೊಟೀಸ್

ವಿಜಯಪುರ: ಹಿಂದು-ಮುಸ್ಲಿಂರ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಹರಡುತ್ತಿರುವ ಆಪಾದನೆ ಮೇರೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಕೀಲ ಆಸಿಫುಲ್ಲಾ ಸೈಯದ್ ಖಾದರಭಾಷಾ ಖಾದ್ರಿ ಅವರಿಗೆ ತಾಲೂಕು ದಂಡಾಧಿಕಾರಿ ನೋಟಿಸ್ ನೀಡಿದ್ದಾರೆ.

ಒಂದು ವರ್ಷ ಶಾಂತ ರೀತಿಯಿಂದ ಇರುವ ಸಲುವಾಗಿ 1 ಕೋಟಿ ರೂಪಾಯಿಗಳ ಇಂಟೀರಿಯಂ ಬಾಂಡ್ ಯಾಕೆ ಬರೆಯಿಸಿಕೊಳ್ಳಬಾರದು ಎನ್ನುವ ಬಗ್ಗೆ ಕಾರಣ ಕೊಡಲು ಅಗತ್ಯಪಡಿಸಲಾಗಿದೆ. ಮತ್ತು ವಿಚಾರಣೆಯನ್ನು ಮೇ 26 ರಂದು ಬೆಳಗ್ಗೆ 11.39ಕ್ಕೆ ನಿಗದಿಪಡಿಸಿ ಆದೇಶಿಸಲಾಗಿದೆ ಎಂದು ಮೇ 13 ರಂದೇ ತಾಲೂಕು ದಂಡಾಧಿಕಾರಿ ಪ್ರಶಾಂತ ಚನಗೊಂಡ ನೊಟೀಸ್‌ನಲ್ಲಿ ತಿಳಿಸಿದ್ದಾರೆ.

ಗೋಳಗುಮ್ಮಟ ಪಿಎಸ್‌ಐ ದೂರಿನ ಅನ್ವಯ ನೊಟೀಸ್ ನೀಡಿರುವ ತಹಸೀಲ್ದಾರ್ ಚನಗೊಂಡ ಅದರಲ್ಲಿ, ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಮೊದಲ ಹಾಗೂ ವಕೀಲ ಆಸಿಫುಲ್ಲಾ ಸೈಯದ್ ಖಾದರಭಾಷಾ ಖಾದ್ರಿ ಅವರನ್ನು ಎರಡನೇ ಪಾರ್ಟಿಯನ್ನಾಗಿಸಿದ್ದಾರೆ. ಶಾಸಕ ಯತ್ನಾಳ ಕಳೆದ ಕೆಲವು ವರ್ಷಗಳಿಂದ ಮುಸ್ಲಿಂ ಸಮುದಾಯ, ಆ ಸಮುದಾಯದ ರೂಢಿ ಸಂಪ್ರದಾಯಗಳು, ಅವರ ನಾಯಕರು ಹಾಗೂ ಐತಿಹಾಸಿಕ ವ್ಯಕ್ತಿಗಳ ವಿರುದ್ಧ ಪ್ರಚೋದನಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತ ಬಂದಿದ್ದು ಅದಕ್ಕೆ ಸಂಬಂಧಪಟ್ಟಂತೆ ವಿಜಯಪುರ ನಗರ ಪವಿಭಾಗ ಒಂದರಲ್ಲೇ ಸುಮಾರು 26 ಪ್ರಕರಣಗಳು ದಾಖಲಾಗಿರುತ್ತವೆ.

ಅದೇ ರೀತಿ ವಕೀಲ ಖಾದ್ರಿ ತಮ್ಮನ್ನು ಮುಸ್ಲಿಂ ಸಮುದಾಯದ ಭಾವಿ ನಾಯಕರೆಂದು ಬಿಂಬಿಸಿಕೊಳ್ಳುತ್ತ ಹಿಂದುಗಳ ವಿರುದ್ಧ ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುತ್ತ ಬಂದಿದ್ದಾರೆ. ಅವರು ಒಬ್ಬ ವಕೀಲರಿದ್ದು ಸಾರ್ವಜನಿಕರನ್ನು, ಅಕ್ಕ ಪಕ್ಕದವರನ್ನು ಹೆದರಿಸುತ್ತ ಅವರ ಮೇಲೆ ದೌರ್ಜನ್ಯ ಎಸಗುತ್ತ ಬಂದಿದ್ದಾರೆ. ಈವರೆಗೆ ಇವರ ಮೇಲೆ ಒಟ್ಟು 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಎರಡು ಪಾರ್ಟಿಯವರು ನೀಡುವ ಪ್ರಚೋದನಕಾರಿ ಹೇಳಿಕೆಗಳಿಂದ ವಿಜಯಪುರ ನಗರದ ಹಿಂದು ಮತ್ತು ಮುಸ್ಲಿಂ ಜನಾಂಗದ ನಡುವೆ ಇದ್ದ ಬಾಂಧವ್ಯ ಕದಡಿ ಎರಡೂ ಸಮುದಾಯದ ನಡುವೆ ಜಾತಿ, ಮತ, ಪಂಥ ಹಾಗೂ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಮತ್ತು ಮತೀಯ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆಗಳನ್ನು ನೀಡಿ ಅನ್ಯ ಮತೀಯ ನಂಬಿಕೆಗಳನ್ನು ದ್ವೇಷ ಭಾವನೆಯಿಂದ ಅಪಮಾನಗೊಳಿಸಿ ಅಪನಂಬಿಕೆ ಉಂಟು ಮಾಡುವ ಸಾಧ್ಯತೆಗಳಿದ್ದುದರಿಂದ ಇವರಿಂದ ಮುಂಜಾಗ್ರತಾ ಕ್ರಮವಾಗಿ ಇಂಟೀರಿಯಂ ಬಾಂಡ್ ಪಡೆದುಕೊಳ್ಳಲು ಸಲ್ಲಿಕೆಯಾದ ಪ್ರಸ್ತಾವನೆ ಅನ್ವಯ ನೊಟೀಸ್ ನೀಡಲಾಗಿದೆ ಎಂದು ತಿಳಿಸಲಾಗಿದೆ.