ಜಿಲ್ಲೆ

ದರಪಟ್ಟಿ ಪ್ರಕಟಿಸದಿದ್ದರೆ ನೋಟಿಸ್ ಗ್ಯಾರಂಟಿ

ಬಸವರಾಜ ವೀರಪ್ಪ ಗರಗ

ಬ್ಯಾಡಗಿ: ಕೃಷಿ ಪರಿಕರ ಹಾಗೂ ಗೊಬ್ಬರ, ಬೀಜ ಮಾರಾಟಗಾರರು ಮಾರಾಟ ಕೇಂದ್ರದ ಎದುರು ಕಡ್ಡಾಯವಾಗಿ ದರಪಟ್ಟಿ ಪ್ರಕಟಿಸಬೇಕಿದ್ದು, ಈ ನಿಯಮ ಉಲ್ಲಂಘಿಸಿದಲ್ಲಿ ನೋಟಿಸ್ ನೀಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ತಿಳಿಸಿದರು.

ಪಟ್ಟಣದ ತಾಲೂಕು ಕೃಷಿಕ ಸಮಾಜ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ಪೂರ್ವಸಿದ್ಧತೆ, ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಜಾಗೃತಿ ಸಭೆ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಶಿಬಿರದಲ್ಲಿ ಅವರು ಮಾತನಾಡಿದರು.

ರಸಗೊಬ್ಬರಗಳನ್ನು ರೈತರಿಗೆ ಸರಿಯಾದ ಸಮಯಕ್ಕೆ ಮತ್ತು ಸರ್ಕಾರ ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ, ಕೆಲ ಮಾರಾಟಗಾರರು ಇಲಾಖೆಯ ನಿಯಮ ಪಾಲಿಸುತ್ತಿಲ್ಲ ಎಂದು ರೈತರಿಂದ ದೂರುಗಳು ಬಂದಿವೆ. ಯಾವುದೆ ಕಾರಣಕ್ಕೂ ಮಾರಾಟಗಾರರು ನಿಯಮ ಉಲ್ಲಂಘಿಸುವ ಹಾಗೂ ರೈತರಿಗೆ ಹೆಚ್ಚಿನ ದರದಲ್ಲಿ ಮಾರಲು ಅವಕಾಶ ನೀಡುವುದಿಲ್ಲ. ಮುಂಗಾರು ಹಂಗಾಮು ಪ್ರಾರಂಭವಾಗುವ ಮೊದಲೇ ಅಗತ್ಯ ಡಿಎಪಿ, ಯೂರಿಯಾ ಮತ್ತು ಇತರೆ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಂಡು ರಸಗೊಬ್ಬರಗಳ ಕೊರತೆ ಆಗದಂತೆ ಜವಾಬ್ದಾರಿ ವಹಿಸಬೇಕು. ಎಲ್ಲ ಅಂಗಡಿಯವರು ಎರಡು ದಿನಗಳಲ್ಲಿ ದರಪಟ್ಟಿ ಮತ್ತು ದಾಸ್ತಾನು ವಿವರ ಪ್ರದರ್ಶಿಸಬೇಕು. ತಪ್ಪಿದಲ್ಲಿ ಇಲಾಖೆಯ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಹಾಗೂ ಮೇಲಧಿಕಾರಿಗಳ ನಿರ್ದೇಶನದಂತೆ ಜಾಗೃತಿ ಸಭೆ ಏರ್ಪಡಿಸಿದ್ದು, ಗೈರು ಹಾಜರಾದ ಎಲ್ಲ ಮಾರಾಟಗಾರರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.

ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ ಮಾತನಾಡಿ, ಎಲ್ಲಾ ಕೃಷಿ ಪರಿಕರ ಮಾರಾಟಗಾರರು ತಾವು ಮಾರಾಟ ಮಾಡುವ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರಗಳ ಪಿಸಿಒ ಫಾಮ್ರ್ ಸರಬರಾಜು ಮೂಲ ಪ್ರಮಾಣಪತ್ರಗಳನ್ನು ತಮ್ಮ ಪರವಾನಗಿ ಪತ್ರದಲ್ಲಿ ನಮೂದಿಸಿಕೊಂಡು ನಿಯಮ ಪಾಲನೆ, ಕೃಷಿ ಪರಿಕರಗಳನ್ನು ಖರೀದಿಸಿದ ರೈತರಿಗೆ ಕಡ್ಡಾಯವಾಗಿ ಬಿಲ್ ನೀಡಬೇಕು. ಕೀಟನಾಶಕಗಳನ್ನು ಖರೀದಿಸಿ ಸಂಗ್ರಹಣೆ, ದ್ರಾವಣ ತಯಾರಿ, ಸಿಂಪರಣೆ ಮಾಡುವಾಗ ಸುರಕ್ಷಿತ ಕ್ರಮಗಳ ತಿಳಿಸುವಂತೆ ಸೂಚಿಸಿದರು.

ಸುರೇಶ ಅಕ್ಕೂರ, ಹಾಲೇಶ ಮೋಟೆಬೆನ್ನೂರು, ಹುಚ್ಚಪ್ಪ ಒಡ್ಡರ, ಮಂಜುನಾಥ ಬೆನಕನಕೊಂಡ, ಕೃಷಿ ಅಧಿಕಾರಿ ನಿಂಗಪ್ಪ ಕಾಕೋಳ ಇದ್ದರು.