RAICHUR 
ಜಿಲ್ಲೆ

ವಿಶ್ವವಿದ್ಯಾಲಯದಿಂದ ಕಾಲೇಜುಗಳಿಗೆ ಜಿಎಸ್‌ಟಿ ಭರಿಸುವಂತೆ ನೋಟಿಸ್

ರಾಯಚೂರು ಇತ್ತೀಚಿಗೆ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ತನ್ನ ಆಧೀನದಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ 2021-22 ನೇ ಸಾಲಿನಿಂದ ಇಲ್ಲಿಯವರೆಗೆ ಸಂಯೋಜನಾ ಶುಲ್ಕದ ಮೇಲೆ ಜಿಎಸ್‌ಟಿ ಮೊತ್ತವನ್ನು ಪಾವತಿಸುವಂತೆ ಸೂಚನೆ ನೀಡುವುದರ ಜತೆಗೆ ೀ 15 ದಿನಗಳ ಕಾಲಾವಕಾಶವನ್ನು ನೀಡಿ ಆದೇಶವನ್ನು ಹೊರಡಿಸಿರುವುದು ಖಂಡನೀಯವಾಗಿದೆಂದು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಹೇಳಿದರು.

ನಗರದ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಎಸ್‌ಟಿ ಕುರಿತಂತೆ ಚರ್ಚಿಸುವ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇರಬೇಕು ಆದರೆ ಬಳ್ಳಾರಿ ವಿಭಾಗದ ಕೇಂದ್ರ ತೆರಿಗೆ ಮುಖ್ಯ ಅಧೀಕ್ಷಕರು ರಾಯಚೂರು ವಿಶ್ವವಿದ್ಯಾಲಯಕ್ಕೆ 2021 ರಿಂದ 2024 ನೇ ಸಾಲಿನವರೆಗೆ ಸಂಯೋಜಿತ ಶುಲ್ಕ , ಅದರ ಮೇಲೆ 18 ರಷ್ಟು ತೆರೆಗೆ ಹಾಗೂ ಬಾಕಿ ಬಡ್ಡಿಯನ್ನು ಸಂದಾಯವನ್ನು ಮಾಡುವಂತೆ ನೋಟಿಸ್ ಹೊರಡಿಸಿದ್ದಾರೆ.

ವಿಶ್ವವಿದ್ಯಾಲಯದವರು ಎಲ್ಲಾ ತನ್ನ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಜಿಎಸ್‌ಟಿ ಭರಿಸುವಂತೆ ಆದೇಶ ಹೊರಡಿಸಿದೆ. ಕೇವಲ ತಾರಾನಾಥ ಶಿಕ್ಷಣ ಸಂಸ್ಥೆ ಒಂದರಲ್ಲೇ 5 ಲಕ್ಷ ಹಣವನ್ನು ತಕ್ಷಣವೇ ಭರಿಸಬೇಕೆಂದು ತಿಳಿಸಿದ್ದು, ಸಣ್ಣ-ಪುಟ್ಟ ಕಾಲೇಜುಗಳು 5 ವರ್ಷದ ಜಿಎಸ್‌ಟಿ ಹಾಗೂ ಅದರ ಬಡ್ಡಿಯನ್ನು ಎಲ್ಲಿಂದ ಭರಿಸಬೇಕು, ಸರ್ಕಾರವು ಕೇವಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅದಕ್ಕೆ ಮಹನೀಯರ ಹೆಸರುಗಳನ್ನು ಇಟ್ಟರೆ ಮಾತ್ರ ಸಾಲದು ಅದಕ್ಕೆ ಸೂಕ್ತ ಅನುದಾನವನ್ನು ನೀಡಬೇಕು ಇಲ್ಲವಾದಲ್ಲಿ ಅಭಿವೃದ್ಧಿ ಹೊಂದಲು ಸಾದ್ಯವಿಲ್ಲ. ಆದರಿಂದ ಇಂದಿನ ಸಭೆಯ ಮೂಲಕ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಜಿ.ಎಸ್.ಟಿಯನ್ನು ಭರಿಸುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಟಿಎಸ್‌ಎಸ್ ಕಾರ್ಯದರ್ಶಿ ಅಂಬಾಪತಿ ಪಾಟೀಲ್, ನಂದಿನಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಮಹಾಲಿಂಗಪ್ಪ, ಟ್ಯಾಗೂರು ಶಿಕ್ಷಣ ಸಂಸ್ಥೆಯ ಸದಸ್ಯ ದರೂರು ಬಸವರಾಜ, ಡಾ.ಬಿ.ವಿಜಯರಾಜೇಂದ್ರ, ಆಲಿಸಾ ಜೋಸೆಪ್,ಮಂಜುನಾಥ ಪಾಟೀಲ್,ಪರ್ವತರೆಡ್ಡಿ ಸೇರಿ ಅನೇಕರು ಇದ್ದರು.