ಜಿಲ್ಲೆ

ಪಾಲಿಕೆ ತಪ್ಪಿಗೆ ಜನರಿಗೆ ಬರೆ; 5 ವರ್ಷದ ಆಸ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವ ಬಿಬಿಎಂಪಿ

| ರಮೇಶ ದೊಡ್ಡಪುರ ಬೆಂಗಳೂರು

ಈಗಾಗಲೇ ಕೋವಿಡ್ ಕಾರಣದಿಂದ ಆರ್ಥಿಕ, ಮಾನಸಿಕ ಸಂಕಷ್ಟ ಅನುಭವಿಸುತ್ತಿರುವ ನಾಗರಿಕರಿಗೆ ಬಿಬಿಎಂಪಿ ವತಿಯಿಂದ ನೀಡಲಾಗುತ್ತಿರುವ ಆಸ್ತಿ ತೆರಿಗೆ ಬಾಕಿ ವಸೂಲಿ ನೋಟಿಸ್ ಮತ್ತಷ್ಟು ಆಘಾತ ನೀಡುತ್ತಿದೆ. ಸ್ವಯಂಘೊಷಿತ ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿ ವಲಯ ವರ್ಗೀಕರಣದಲ್ಲಿ ತಪ್ಪು ಘೊಷಣೆ ಮಾಡಿರುವ ಸಲುವಾಗಿ ನಷ್ಟವಾಗಿರುವ ಬಾಕಿ ಮೊತ್ತದ ಜತೆಗೆ ಬೃಹತ್ ಪ್ರಮಾಣದಲ್ಲಿ ದಂಡ ಹಾಗೂ ಸೆಸ್ ವಿಧಿಸಿ ನೋಟಿಸ್ ನೀಡಲಾಗುತ್ತಿದೆ. ಬಿಬಿಎಂಪಿ ತಾನು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಜನರ ಮೇಲೆ ಆರ್ಥಿಕ ಸಂಕಷ್ಟ ಹೇರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

2016ರಲ್ಲಿ ಬದಲಾವಣೆ: ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಸಲು ಇದ್ದ ವ್ಯವಸ್ಥೆಯನ್ನು ಬಿಬಿಎಂಪಿ 2016ರಲ್ಲಿ ಬದಲಾವಣೆ ಮಾಡಿತ್ತು. ನಗರದ ಬೆಳವಣಿಗೆಗೆ ಅನುಗುಣವಾಗಿ ವಲಯಗಳ ಮರುವರ್ಗೀಕರಣ ಮಾಡಲಾಯಿತು. ‘ಎ’ ಎಂದರೆ ಅತಿಹೆಚ್ಚು ತೆರಿಗೆ ವಿಧಿಸುವ ಹಾಗೂ ‘ಎಫ್’ ಎಂದರೆ ಕಡಿಮೆ ತೆರಿಗೆ ಪಾವತಿಸುವ ವಲಯಗಳಾಗಿ ವಿಂಗಡಿಸಲಾಯಿತು. ಆಸ್ತಿ ಮಾಲೀಕರು ವೆಬ್​ಸೈಟ್ ನಲ್ಲಿ ತಾವೇ ವಲಯವನ್ನು ಆಯ್ಕೆ ಮಾಡಿಕೊಳ್ಳಬಲ್ಲ ಅವಕಾಶವನ್ನು ನೀಡಲಾಯಿತು.

ನಗರದಲ್ಲಿ ಒಟ್ಟು 22 ಲಕ್ಷ ಆಸ್ತಿಗಳಿದ್ದು, ಈ ಪೈಕಿ 78,000 ಆಸ್ತಿಗಳ ಮಾಲೀಕರು ತಮ್ಮ ವಲಯ ವರ್ಗೀಕರಣವನ್ನು ತಪ್ಪಾಗಿ ಘೊಷಿಸಿ ಕೊಂಡಿದ್ದಾರೆ. ಅಂದರೆ, ‘ಬಿ’ ವಲಯದಲ್ಲಿದ್ದವರು ಆಸ್ತಿ ಪಾವತಿ ವೇಳೆ ‘ಎಫ್’ ವಲಯವನ್ನು ನಮೂದಿಸಿ ಅದಕ್ಕನುಗುಣವಾಗಿ ತೆರಿಗೆ ಪಾವತಿಸಿದ್ದಾರೆ. ಅನೇಕ ವಸತಿಗಳ ಮಾಲೀಕರು, ಬದಲಾದ ವ್ಯವಸ್ಥೆಯ ಅರಿವಿಲ್ಲದೆ ಆಕಸ್ಮಿಕವಾಗಿ ತಪು್ಪ ವಲಯ ನಮೂದಿಸಿದ್ದಾರೆ. ಆದರೆ ಅನೇಕರು, ಮುಖ್ಯವಾಗಿ ಅನೇಕ ವಾಣಿಜ್ಯ ಆಸ್ತಿಗಳ ಮಾಲೀಕರು ಕಡಿಮೆ ಆಸ್ತಿ ತೆರಿಗೆ ಪಾವತಿಸಲು ಉದ್ದೇಶಪೂರ್ವಕವಾಗಿ ತಪು್ಪ ವಲಯ ಘೋಷಿಸಿದ್ದಾರೆ. ಇದರಿಂದಾಗಿ ಬಿಬಿಎಂಪಿಗೆ 116 ಕೋಟಿ ರೂ. ಆದಾಯ ಖೋತಾ ಆಗಿದೆ ಎಂದು ಅಂದಾಜಿಸಲಾಗಿದೆ.

ಅಗಾಧ ದಂಡ, ಬಡ್ಡಿ: ಬಿಬಿಎಂಪಿ ತನಗಾಗಿರುವ ನಷ್ಟ ಭರಿಸಿಕೊಳ್ಳಲು ಆಸ್ತಿ ಮಾಲೀಕರ ಮನೆಗೆ ತೆರಳಿ ನೋಟಿಸ್ ನೀಡುತ್ತಿದೆ. ಆದರೆ ಅಲ್ಲಿ ವಿವರಿಸಲಾಗಿರುವ ದಂಡ ಹಾಗೂ ಸೆಸ್ ಮೊತ್ತ ನೋಡಿ ಆಸ್ತಿ ಮಾಲೀಕರಿಗೆ ಆಘಾತವಾಗುತ್ತಿದೆ. ಉದಾಹರಣೆಗೆ, ಜಾಲಹಳ್ಳಿಯ ನಿವಾಸಿಯೊಬ್ಬರಿಗೆ 2016-17ರಿಂದ 2019- 20ರವರೆಗೆ ಬಾಕಿ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಹೊಸ ವ್ಯವಸ್ಥೆಯಂತೆ 21 ಸಾವಿರ ರೂ. ಪಾವತಿಸಬೇಕಿತ್ತು, ಆದರೆ ತಪ್ಪಾಗಿ 16 ಸಾವಿರ ರೂ. ಪಾವತಿಸಲಾಗಿದೆ. ವಾರ್ಷಿಕ ಶೇ.24 ಸೆಸ್ ಮೊತ್ತ 5,200 ರೂ. ಪಾವತಿಸಬೇಕಿತ್ತು, ಆದರೆ 3,900 ರೂ. ಪಾವತಿಸಲಾಗಿದೆ. ಒಟ್ಟಾರೆ ನಾಲ್ಕು ವರ್ಷಕ್ಕೆ 6,700 ರೂ. ಅಸಲು ತೆರಿಗೆ ಪಾವತಿಸಬೇಕು. ಆದರೆ ಈ ಮೊತ್ತಕ್ಕೆ ದಂಡವಾಗಿ ತೆರಿಗೆ ಮೊತ್ತದ ದುಪ್ಪಟ್ಟು ಅಂದರೆ 13,500 ರೂ. ವಿಧಿಸಿ ಒಟ್ಟು 20 ಸಾವಿರ ರೂ. ಪಾವತಿಸುವಂತೆ ತಿಳಿಸಲಾಗಿದೆ. ನಾವು

ಪ್ರಾಮಾಣಿಕವಾಗಿ ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದೇವೆ. ಆದರೆ ಹೊಸ ಪದ್ಧತಿಯ ಮಾಹಿತಿ ಇಲ್ಲದೆ ತಪ್ಪಾಗಿದೆ. ತಪು್ಪ ನಮೂದಿಸಿದ ಕನಿಷ್ಠ ಒಂದು ವರ್ಷದಲ್ಲಾದರೂ ನೋಟಿಸ್ ನೀಡಬಹುದಿತ್ತು. ಆದರೆ ಈಗ ನಾಲ್ಕು ವರ್ಷದ ನಂತರ ಏಕಾಏಕಿ ಬೃಹತ್ ಮೊತ್ತ ಪಾವತಿಸಿ ಎನ್ನುವುದು ನಿಜಕ್ಕೂ ಆಘಾತಕಾರಿಯಾಗಿದೆ. ಕೆಲವು ವಾಣಿಜ್ಯ ಆಸ್ತಿ ಮಾಲೀಕರು ಉದ್ದೇಶ ಪೂರ್ವಕವಾಗಿ ತಪು್ಪ ವಲಯ ನಮೂದಿಸಿರಬಹುದು. ಆ ಕಾರಣಕ್ಕೆ ಎಲ್ಲರಿಗೂ ಶಿಕ್ಷೆ ನೀಡಬಾರದು ಎಂದು ಆಸ್ತಿ ಮಾಲೀಕರು ಮನವಿ ಮಾಡಿದ್ದಾರೆ.

ಇದೇ ರೀತಿ, ಬಿಬಿಎಂಪಿಗೆ ಸಲ್ಲಬೇಕಿರುವ 116 ಕೋಟಿ ರೂ. ಬಾಕಿ ಮೊತ್ತಕ್ಕೆ 89 ಕೋಟಿ ರೂ. ಬಡ್ಡಿ ಹಾಗೂ 232 ಕೋಟಿ ರೂ. ದಂಡ ವಿಧಿಸಲಾಗಿದೆ. ಅನೇಕ ಆಸ್ತಿ ಮಾಲೀಕರು ಬಿಬಿಎಂಪಿ ಸೇರಿ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸುತ್ತಿದ್ದಾರೆ. ಇಷ್ಟು ಪ್ರಮಾಣದ ದಂಡ ಅಥವಾ ಬಡ್ಡಿ ವಿಧಿಸುವ ಬದಲು ಬಡ್ಡಿ ಮತ್ತು ದಂಡದ ಮೊತ್ತಕ್ಕೆ ವಿನಾಯಿತಿ ಕೊಟ್ಟು, ಆಸ್ತಿ ತೆರಿಗೆಯನ್ನು ಮಾತ್ರ ಕಟ್ಟಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈಗ ತೊಂದರೆ ಇಲ್ಲ: ಈ ಹಿಂದೆ ಸ್ವಯಂಘೋಷಿತ ಆಸ್ತಿ ಘೋಷಣೆ ಚಾಲ್ತಿಯಲ್ಲಿದ್ದಾಗ ವಲಯ ಆಯ್ಕೆ ಅವಕಾಶ ವನ್ನು ಮಾಲೀಕರಿಗೆ ನೀಡಲಾಗಿತ್ತು. ಆದರೆ ಇದೀಗ ಎಲ್ಲ ಆಸ್ತಿಗಳನ್ನೂ ಪಿಐಡಿ ಆಧಾರದಲ್ಲಿ ಜಿಯೋ ಟ್ಯಾಗ್ ಮಾಡಲಾಗಿದೆ. ಪಿಐಡಿ ನಮೂದಿಸಿದ ಕೂಡಲೆ ಸ್ವಯಂಚಾಲಿತವಾಗಿ ವಲಯವನ್ನು ವೆಬ್​ಸೈಟ್ ಆಯ್ಕೆ ಮಾಡಿಕೊಳ್ಳುತ್ತದೆ. ಅದನ್ನು ಬದಲಾಯಿಸಲು ಅವಕಾಶ ನೀಡಿಲ್ಲವಾದ್ಧರಿಂದ ಇನ್ನು ಮುಂದೆ ಪಾವತಿಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.

ಆಸ್ತಿ ಮಾಲೀಕರ ವಾದ-ಒತ್ತಾಯ

  • 2016ರಲ್ಲಿ ನಿಯಮ ಬದಲಾವಣೆ ಆಗದಿದ್ದಾಗ ಸೂಕ್ತ ಮಾಹಿತಿ, ಜಾಗೃತಿ ಮೂಡಿಸದೆ ಇರುವುದು ಬಿಬಿಎಂಪಿ ತಪು್ಪ
  • ಕನಿಷ್ಠ ಒಂದು ವರ್ಷದ ಅವಧಿಯಲ್ಲಾದರೂ ನೋಟಿಸ್ ನೀಡದೆ ನಾಲ್ಕು ವರ್ಷಗಳ ನಂತರ ನೋಟಿಸ್ ನೀಡುತ್ತಿರುವುದು ಸರಿಯಲ್ಲ
  • ಕೆಲವರು ಉದ್ದೇಶಪೂರ್ವಕವಾಗಿ ತಪು್ಪ ಮಾಡಿರಬಹುದು, ಹಾಗೆಂದು ಉಳಿದ ಅಮಾಯಕರಿಗೆ ಶಿಕ್ಷೆ ನೀಡುವುದು ಸರಿಯಲ್ಲ
  • ಬಿಬಿಎಂಪಿಗೆ ತೆರಿಗೆ ಮೊತ್ತದಿಂದ ಆಗಿರುವ ನಷ್ಟವನ್ನು ಮಾತ್ರ ಕಟ್ಟಿಸಿಕೊಂಡು ಬಡ್ಡಿ ಹಾಗೂ ಅಗಾಧ ಪ್ರಮಾಣದ ದಂಡವನ್ನು ಮನ್ನಾ ಮಾಡಬೇಕು

ಅಶ್ವತ್ಥನಾರಾಯಣ ಮೇಲೆ ನಿರೀಕ್ಷೆ

ಕೋವಿಡ್ ಮತ್ತು ಲಾಕ್​ಡೌನ್ ಕಾರಣದಿಂದ ಆಸ್ತಿ ಮಾಲೀಕರು ಈಗಾಗಲೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸ್ವಯಂ ಘೊಷಿತ ಆಸ್ತಿ ತೆರಿಗೆ ಪದ್ಧತಿಯಡಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೊಷಿಸಿಕೊಂಡು ದಂಡ ಮತ್ತು ಬಡ್ಡಿ ಸುಳಿಗೆ ಸಿಲುಕಿರುವ ಆಸ್ತಿ ಮಾಲೀಕರಿಗೆ ವಿನಾಯಿತಿ ನೀಡಬೇಕು ಎಂದು ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಸಂದರ್ಭದಲ್ಲಿ ಡಿಸಿಎಂ ಆಗಿದ್ದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ಸಲಹೆ ನೀಡಿದ್ದರು. ಇದೀಗ ಮತ್ತೆ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಕುರಿತು ಗಮನ ಸೆಳೆದು ಬೆಂಗಳೂರು ಆಸ್ತಿ ಮಾಲೀಕರ ಸಂಕಷ್ಟವನ್ನು ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.

ತಪ್ಪಾಗಿ ವಲಯ ನಮೂದಿಸಿದವರಿಗೆಲ್ಲ ನೋಟಿಸ್ ನೀಡಲಾಗಿದೆ. ಇವರಲ್ಲಿ ಯಾರು ಆಕಸ್ಮಿಕವಾಗಿ ತಪು್ಪ ನಮೂದಿಸಿದ್ದಾರೆ ಅಥವಾ ಯಾರು ಉದ್ದೇಶಪೂರ್ವಕವಾಗಿ ನಮೂದಿಸಿದ್ದಾರೆ ಎಂದು ಪತ್ತೆಹಚ್ಚುವುದು ಅಸಾಧ್ಯ. ಆಸ್ತಿ ಮಾಲೀಕರ ಮನವಿಗಳ ಕುರಿತು ಪರಿಶೀಲಿಸಿ, ಸರ್ಕಾರದೊಂದಿಗೆ ರ್ಚಚಿಸಿ ನಿರ್ಧರಿಸಲಾಗುತ್ತದೆ.

| ಎಸ್. ಬಸವರಾಜು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ