ಕರ್ನಾಟಕ ಸಂಭ್ರಮ&50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಕಾರ್ಯಕ್ರಮ ನಡೆಯಲಿರುವ ಗುಡ್ಡಾಪುರಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಭೇಟಿ ಪೂರ್ವ ಸಿದ್ಧತೆ ಪರಿಶೀಲಿಸಿದರು. ಎಸ್ಪಿ ಋಷಿಕೇಶ ಸೋನಾವಣೆ, ವಿನಯಕುಮಾರ ಪಾಟೀಲ, ನಬಿಲಾಲ ಗಬಸಾವಳಗಿ ಮತ್ತಿತರರಿದ್ದಾರೆ. 
ಜಿಲ್ಲೆ

ಕರ್ನಾಟಕ ಸಂಭ್ರಮ&50ರ ಯಶಸ್ಸಿಗೆ ಸೂಚನೆ

ವಿಜಯಪುರ: ಕರ್ನಾಟಕ ಸಂಭ್ರಮ&50 ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಹಿನ್ನೆಲೆ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದ ದಾನಮ್ಮದೇವಿ ದೇವಸ್ಥಾನದಲ್ಲಿ ಸೆ. 30 ರಂದು ನಡೆಯುವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಯನ್ನು ಜಿಲ್ಲಾಧಿಕಾರಿ ಟಿ. ಭೂಬಾಲನ್​ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕನ್ನಡ ಮತ್ತು ಸಂಸತಿ ಇಲಾಖೆ ಸಚಿವ ಶಿವರಾಜ್​ ತಂಗಡಗಿ ಸೇರಿದಂತೆ ಮತ್ತಿತರ ಸಚಿವರು, ಗಣ್ಯರು ಆಗಮಿಸಲಿದ್ದು, ಶಿಷ್ಟಾಚಾರದಂತೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರ್ನಾಟಕ ಗಡಿನಾಡ ಹಿರಿಯ ಚೇತನಗಳಾದ ಡಾ. ಚನ್ನಬಸವ ಪಟ್ಟದೇವರು, ಡಾ. ಜಯದೇವಿ ತಾಯಿ ಲಿಗಾಡೆ ಹಾಗೂ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯುತ್ತಿದ್ದು, ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಆಯೋಜಿಸುವ ಹಿನ್ನೆಲೆ ಈಗಾಗಲೇ ಜಿಲ್ಲಾಡಳಿತದಿಂದ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಹಲವು ಸಮಿತಿಗಳನ್ನು ರಚಿಸುವ ಜತೆಗೆ ಅಧಿಕಾರಿಗಳನ್ನು ನೇಮಿಸಿ ಜವಾಬ್ದಾರಿ ವಹಿಸಲಾಗಿದೆ.

ಅಲ್ಲದೆ, ಈಗಾಗಲೇ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯಲ್ಲಿ ಸೂಚನೆ ನೀಡಿದ ಕಾರ್ಯಗಳನ್ನು ಯಾವುದೇ ಸಮಸ್ಯೆಬಾರದಂತೆ ನಿರ್ವಹಣೆ ಮಾಡುವಂತೆ ಸೂಚಿಸಿದರು.

ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಯುವ ದೃಷ್ಟಿಯಿಂದ ಅಗತ್ಯ ಎಲ್ಲ ಪೂರ್ವ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಿದರು.

ಕರ್ನಾಟಕ ಸುವರ್ಣ ಸಂಭ್ರಮದ ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗಣ್ಯರು ಸೇರಿದಂತೆ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಲು ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸುತ್ತಿದ್ದು, ಯಾವುದೇ ಸಮಸ್ಯೆಯಾಗದಂತೆ ವಸತಿ ಸೇರಿ ತರ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ ಅವರು, ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ, ಮೆರವಣಿಗೆ, ವೇದಿಕೆ ನಿರ್ವಹಣೆ ಮತ್ತು ನಿರ್ಮಾಣ, ಸಾಂಸ್ಕೃತಿಕ ಕಾರ್ಯಕ್ರಮ, ಸಾರಿಗೆ, ಪ್ರಚಾರ, ಆರೋಗ್ಯ, ಸ್ವಚ್ಛತೆ, ಭದ್ರತೆ ಹಾಗೂ ಊಟೋಪಚಾರ ಸಮಿತಿಗಳನ್ನು ರಚಿಸಲಾಗಿದ್ದು, ತಮಗೆ ವಹಿಸಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವುದರಿಂದ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಎಂದು ಹೇಳಿದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತಾನಾಡಿ, ಭದ್ರತಾ ವ್ಯವಸ್ಥೆಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ದಾನಮ್ಮದೇವಿ ಟ್ರಸ್ಟ್​ ಅಧ್ಯಕ್ಷ ವಿಜುಗೌಡ ಪಾಟೀಲ, ಕಾರ್ಯದರ್ಶಿ ವಿಠಲ ಪೂಜಾರ, ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ಪಿಆರ್​ಡಿ ಕಾರ್ಯನಿರ್ವಾಹಕ ಅಭಿಯಂತರ ನಬಿಲಾಲ ಗಬಸಾವಳಗಿ, ಗ್ರಾಮೀಣ ಕುಡಿಯವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸವರಾಜ ಕುಂಬಾರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ. ಚಿಕ್ಕಲಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್​ ಸೌದಾಗರ್​, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮತ್ತಿತರರಿದ್ದರು.