ಜಿಲ್ಲೆ

ಕಟ್ಟಡಗಳ ಅಕ್ರಮ ಉಳಿಕೆ ಧ್ವಂಸಕ್ಕೆ ಸೂಚನೆ

ವಿಜಯವಾಣಿ ಸುದ್ದಿಜಾಲ ಗುರುಪುರ

ವಿಸ್ತರಣೆಗೊಳ್ಳುತ್ತಿರುವ ಮಂಗಳೂರು(ಬಿಕರ್ನಕಟ್ಟೆ)-ಮೂಡುಬಿದಿರೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ವಾಮಂಜೂರು ಚರ್ಚ್ ಎದುರಿನ ಕೆಲವು ಕಟ್ಟಡಗಳಲ್ಲಿ ಗುರುತಿಸಿದಷ್ಟು ಜಾಗ ತೆರವುಗೊಳಿಸದೆ, ನಿಯಮ ಉಲ್ಲಂಘಿಸಿ ಉಳಿಸಿಕೊಂಡಿರುವ ಭಾಗ ಧ್ವಂಸಗೊಳಿಸುವಂತೆ ಕಟ್ಟಡ ಮಾಲೀಕರಿಗೆ ಸೋಮವಾರ ಎನ್‌ಎಚ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಎನ್‌ಎಚ್ ಪ್ರಾಧಿಕಾರ ಕೆಲವು ಸಮಯದ ಹಿಂದೆ ಹೆದ್ದಾರಿ ವಿಸ್ತರಣೆಗೆ ಅಗತ್ಯವಿರುವ ಪ್ರದೇಶದಲ್ಲಿ ಸರ್ವೇ ನಡೆಸಿ ಕಟ್ಟಡಗಳ ಸಹಿತ ಇತರ ಖಾಲಿ ಜಾಗಗಳಿಗೆ ಗುರುತು ಮಾಡಿ, ಸೂಕ್ತ ಪರಿಹಾರ ವಿತರಿಸಿದೆ. ವಾಮಂಜೂರು ಸೇರಿದಂತೆ ಕೆಲವು ಕಡೆಯಲ್ಲಿ ಕಟ್ಟಡ ಮಾಲೀಕರು ಗುರುತಿಸಿದ್ದಕ್ಕಿಂತ ಕಡಿಮೆ ಜಾಗ ಕೆಡವಿ, ನವೀಕರಣ ಮಾಡಿಕೊಂಡಿದ್ದಾರೆ. ಅಂತಹ ಕಟ್ಟಡಗಳ ಉಳಿದ ಭಾಗ ತೆರವುಗೊಳಿಸಲು ಎನ್‌ಎಚ್ ಸೂಚನೆ ನೀಡಿದೆ.

ಎನ್‌ಎಚ್ ಅಧಿಕಾರಿಗಳ ತಂಡದ ಸೂಚನೆಗೆ ವಾಮಂಜೂರು ಹಾಗೂ ಹತ್ತಿರದ ಪ್ರದೇಶಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೂ, ಹೆದ್ದಾರಿ ವಿಸ್ತರಣೆ ಕಾಮಗಾರಿ ಕೈಗೊಂಡಿರುವ ಡಿಬಿಎಲ್ ಗುತ್ತಿಗೆ ಸಂಸ್ಥೆಗೆ ಎನ್‌ಎಚ್ ಅಧಿಕಾರಿಗಳು ಸ್ಪಷ್ಟ ಸೂಚನೆ ನೀಡಿದರು.

ವಾಮಂಜೂರು ಮತ್ತು ಇತರ ಕಡೆಯಲ್ಲಿ ಎನ್‌ಎಚ್ ಸರ್ವೇ ಮಾಡಿ ಗುರುತಿಸಿ, ಸ್ವಾಧೀನಗೊಳಿಸಿರುವ ಜಾಗದಲ್ಲಿರುವ ಎಲ್ಲ ಕಟ್ಟಡಗಳನ್ನು ಧ್ವಂಸಗೊಳಿಸಲಾಗುವುದು. ಪರಿಹಾರ ಈ ಹಿಂದೆಯೇ ನೀಡಲಾಗಿದೆ. ಗುರುತಿಸಿದಷ್ಟು ಭಾಗ ತೆರವುಗೊಳಿಸದೆ ಕಟ್ಟಡ ಪುನರ್‌ನವೀಕರಣ ಮಾಡಿದ್ದರೆ ಅದಕ್ಕೆ ಎನ್‌ಎಚ್ ಜವಾಬ್ದಾರಿಯಲ್ಲ. ನಮ್ಮ ಕರ್ತವ್ಯ ಮುಂದುರಿಸುತ್ತೇವೆ. - ಜಾವೇದ್ ಆಜ್ಮಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಿರಿಯ ಅಧಿಕಾರಿ https://www.vijayavani.net/national-highway-protest-postponed https://www.vijayavani.net/priyadarshini-society-customer-day-celebration