ಜಿಲ್ಲೆ

ಗಣೇಶ ವಿಜರ್ಸನೆ ಹೊಂಡ ದುರಸ್ತಿಗೆ ಸೂಚನೆ

ಬೆಳಗಾವಿ: ನಗರದಲ್ಲಿ ಗಣೇಶೋತ್ಸವ ಮೆರವಣಿಗೆ ತೆರಳುವ ಮಾರ್ಗ ಹಾಗೂ ಗಣೇಶ ವಿಸರ್ಜನೆ ಹೊಂಡಗಳನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಶನಿವಾರ ಪರಿಶೀಲಿಸಿ, ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸೆ. 7ರಿಂದ ಬೆಳಗಾವಿಯಲ್ಲಿ ಗಣೇಶೋತ್ಸವ ನಡೆಯಲಿದೆ. ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಲ್ಲಿ ಈ ಗಣೇಶೋತ್ಸವ ಸಿದ್ಧತೆ ಕುರಿತು ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆಯ ಮಾರ್ಗಗಳಾದ ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಖಡೇಬಜಾರ್, ಸಮಾದೇವಿಗಲ್ಲಿ, ಕಿರ್ಲೋಸ್ಕರ್ ರೋಡ್, ಧರ್ಮವೀರ ಸಂಭಾಜೀ ವೃತ್ತ, ಕಪಲೇಶ್ವರ ಸೇರಿ ಇನ್ನುಳಿದ ಕಡೆ ಪರಿಶೀಲಿಸಿದರು. ಗಣೇಶ ವಿಸರ್ಜನೆಯ ಹೊಂಡಗಳಾದ ಕಪಿಲೇಶ್ವರದ ಹಳೆಯ ಹೊಂಡ ಮತ್ತು ಹೊಸ ಹೊಂಡ ಸೇರಿ ಜಕ್ಕೇರಿ ಹೊಂಡಗಳನ್ನೂ ಪರಿಶೀಲಿಸಿದರು. ಪ್ರತಿ ವರ್ಷದಂತೆ ಸ್ವಚ್ಛತೆ, ಬೆಳಕಿನ ವ್ಯವಸ್ಥೆ, ಭದ್ರತೆ ಮತ್ತಿತರ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು. ಮಧ್ಯವರ್ತಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳವು ನೀಡಿದ ಸಲಹೆಯಂತೆ ವಿಸರ್ಜನೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.

ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿಸಿಪಿ ರೋಹನ ಜಗದೀಶ, ಎಸಿಪಿ ಶ್ರೀಕಾಂತ ಕಟ್ಟಿಮನಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಇತರ ಅಧಿಕಾರಿಗಳು ಇದ್ದರು.