ವಿಜಯ್‌ಕುಮಾರ್ 
ಜಿಲ್ಲೆ

ಬಿಸಿಯೂಟ ಕಾರ್ಯಕರ್ತರ ಬೇಡಿಕೆ ಈಡೇರಿಸಿ

ಜಿ.ಹೆಚ್. ಧನ್ಯಕುಮಾರ್

ಚಿಕ್ಕಮಗಳೂರು: ಗೌರವ ಧನದ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಕೂಡಲೇ 7ನೇ ವೇತನ ಆಯೋಗದ ಶಿಫಾರಸ್ಸಿನ ಶೇ.50 ರಷ್ಟು ವೇತನ ನೀಡಬೇಕು ಎಂದು ಜಿಲ್ಲಾ ಬಿಸಿಯೂಟ ಕಾರ್ಯಕರ್ತರು ಹಾಗೂ ಗ್ರಾಪಂ ನೌಕರರು ಮತ್ತು ಇತರೆ ಅರೆ ಸರ್ಕಾರಿ ನೌಕರರ ಕ್ರಿಯಾ ಸಮಿತಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯಕುಮಾರ್ ಒತ್ತಾಯಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಳಹಂತದ ನೌಕರರಿಗೆ ಕೆಲಸಕ್ಕೆ ತಕ್ಕ ಪಿಎಫ್, ಇಎಸ್‌ಐ, ವೈದ್ಯಕೀಯ ಸೌಲಭ್ಯ, ರಜೆ, ನಿವೃತ್ತಿ ಉಪಧನ, ನಿವೃತ್ತಿ ವೇತನಗಳನ್ನು ಕಡ್ಡಾಯಗೊಳಿಸುವ ಜತೆಗೆ ವೇತನ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಎಲ್ಲ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ 1,20 ಲಕ್ಷ ಬಿಸಿಯೂಟ ಮಹಿಳೆಯರಿಗೆ ಸುಮಾರು 65 ಸಾವಿರ ಅಂಗನವಾಡಿ ಮಹಿಳೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಹಾಗೂ 6,300 ಗ್ರಾಪಂಗಳಲ್ಲಿ ದುಡಿಯುತ್ತಿರುವ ಗ್ರಾಮ ಸಹಾಯಕರಿಗೆ ಕೆಲಸಕ್ಕೆ ತಕ್ಕ ಸಂಬಳ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಸರ್ಕಾರದ ಅಧೀನದಲ್ಲಿ ಕೆಲಸ ನಿರ್ವಹಿಸುವ ಬಿಸಿಯೂಟ ಕಾರ್ಯಕರ್ತೆಯರಿಗೆ ತಿಂಗಳಿಗೆ ಕೇವಲ 3700 ರೂ.ನೀಡುತ್ತಿದ್ದು, ಇವರಿಗೆ ಅಪಘಾತ, ಪರಿಹಾರ ಇರುವುದಿಲ್ಲ. ವೈದ್ಯಕೀಯ ಹಾಗೂ ನಿವೃತ್ತಿ ವೇತನ, ಪಿಎಫ್, ಇಎಸ್‌ಐ ಸೌಲಭ್ಯವಿರುವುದಿಲ್ಲ. ಅದೇ ರೀತಿಯಲ್ಲಿ ಗ್ರಾಪಂ ನೌಕರರಿಗೆ ಜಿಪಂನಿಂದ ಅನುಮೋದನೆ ಆಗದೆ ನಿವೃತ್ತಿ ಮತ್ತು ಸಾವು, ನೋವು ಸಂಭವಿಸಿದರೆ ಯಾವುದೇ ಸೌಲಭ್ಯವಿರುವುದಿಲ್ಲ ಎಂದು ತಿಳಿಸಿದರು.
ಅನುಮೋದನೆಗೊಂಡ ನೌಕರರಿಗೆ ಗ್ರಾಪಂ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕೀಯ ಒತ್ತಡದಿಂದ ಏಕಾಏಕಿ ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿವೆ.ಬಡ್ತಿ ಮತ್ತು ಅನುಕಂಪದ ಆಧಾರದ ಮೇಲಿನ ನೇಮಕಾತಿ ನಡೆಸದೆ ವಿಳಂಬಗೊಳಿಸಿ ಇರುವ ನೌಕರರಿಗೆ ಹೆಚ್ಚಿನ ಹೊರೆ ಹೊರಿಸಲಾಗುತ್ತಿದೆ ಎಂದು ದೂರಿದರು. ಎಐಟಿಯುಸಿ ಜಿಲ್ಲಾಧ್ಯಕ್ಷ ಜಿ.ರಘು, ಪ್ರಮುಖರಾದ ಪುಷ್ಪಾವತಿ, ಇಂದುಮತಿ, ಸಬೀಮ್‌ಭಾನು, ರಾಜೇಗೌಡ ಇದ್ದರು.