ಮಡಿಕೇರಿ: ಕಲಿಕೆ ಎನ್ನುವುದು ನಿರಂತರವಾದದ್ದು, ಇದಕ್ಕೆ ಅಂತ್ಯವಿಲ್ಲ. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಸಾಹಿತಿ ಪಂದ್ಯಂಡ ರೇಣುಕಾ ಸೋಮಯ್ಯ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾಭವನದಲ್ಲಿ ಕೊಡವ ಮಕ್ಕಡ ಕೂಟದ ೮೩ನೇ ಪುಸ್ತಕ ಹಾಗೂ ಪಂದ್ಯಂಡ ರೇಣುಕಾ ಸೋಮಯ್ಯರವರ ಒಮ್ಮ ತೆಳ್ಚಿ ಬುಡಿ ೨ನೇ ಕೊಡವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಕುಲಿಯುತ್ತ ಇರುತ್ತಾನೆ. ಯಾರಲ್ಲಿ ಕಲಿಯುವ ಪ್ರಯತ್ನ, ಶ್ರಮ ಇರುತ್ತದೆಯೋ ಅವರು ಸಾಧನೆಯ ಹಾದಿ ಹಿಡಿಯುತ್ತಾರೆ. ಗುರಿ ಸಾಧಿಸಲು ಮುಖ್ಯವಾಗಿ ಬೇಕಾಗಿರುವುದು ಆತ್ಮವಿಶ್ವಾಸ ಎಂದು ಸಲಹೆ ನೀಡಿದರು.
ಸಾಹಿತ್ಯ ಲೋಕದ ಅನೇಕ ಪ್ರಕಾರಗಳಲ್ಲಿ ಹಾಸ್ಯವೂ ಒಂದು. ಇಂದಿನ ಆಧುನಿಕ ಸಮಾಜದಲ್ಲಿ ಒತ್ತಡದ ಕಾರ್ಯನಿರ್ವಹಣೆ ಮತ್ತು ಜಂಜಾಟದ ಬದುಕಿನಿಂದ ಮುಕ್ತಿ ದೊರೆಯಲಿ ಎಂಬ ಕಾರಣಕ್ಕೆ ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೆಲವು ವಿಚಾರಗಳನ್ನು ಸಂಗ್ರಹಿಸಿ ನನ್ನದೇ ಆದ ರೀತಿಯಲ್ಲಿ ವಿವರಿಸಿರುವ ಒಮ್ಮ ತೆಳ್ಚಿ ಬುಡಿ ಪುಸ್ತಕದ ಮೂಲಕ ನಗಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ದೈನಂದಿನ ವಿಚಾರಗಳ ಕುರಿತು ಬರೆಯಲಾಗಿದ್ದು, ಚೋಮ-ಚೋಂದ್ ಹೆಸರಿನ ದಂಪತಿ ನಡುವೆ ಇರುವ ತಮಾಷೆ, ಪ್ರೀತಿ, ಒಬ್ಬರಿಗೊಬ್ಬರಿಗೆ ನೀಡುವ ಬೆಂಬಲ, ಜಗಳ, ಬೈಗುಳ ಎಲ್ಲಾ ಕೂಡಿದೆ. ಇದು ತಮಾಷೆಯ ವಿಷಯವಾಗಿದ್ದರೂ, ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಕೃತಿಯಾಗಿದೆ ಎಂದ ರೇಣುಕಾ ಸೋಮಯ್ಯ ಅವರು, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಪುಸ್ತಕ ದಾನಿಗಳು ಹಾಗೂ ಪುಸ್ತಕ ಬಿಡುಗಡೆಗಡೆಗೆ ಸಹಕರಿಸಿದವರಿಗೆ ಇದೇ ಸಂದರ್ಭ ಧನ್ಯವಾದ ಸಲ್ಲಿಸಿದರು.
ಒಮ್ಮ ತೆಳ್ಚಿ ಬುಡಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸೈನಿಕ, ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಳದಿಂದಾಗಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕವನ್ನು ಎಲ್ಲರೂ ಬರೆಯುತ್ತಾರೆ. ಆದರೆ, ಅದು ಓದುವವರಿಗೆ ತಲುಪಬೇಕಾಗಿದೆ. ಪುಸ್ತಕ ಬಿಡುಗಡೆ ಜೊತೆಗೆ ಪ್ರಚಾರವು ಹೆಚ್ಚಾಗಬೇಕು. ಆ ಮೂಲಕ ಪುಸ್ತಕ ಬರೆಯುವವರಿಗೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.
ಈಗಾಗಲೇ ಕೊಡವ ಮಕ್ಕಡ ಕೂಟದ ಮೂಲಕ ಹಲವು ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಕೊಡಗಿನ ಸಾಹಿತ್ಯ ಕ್ಷೇತ್ರದ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪರವರು, ಶೀಘ್ರದಲ್ಲೇ ೧೦೦ನೇ ಪುಸ್ತಕವನ್ನು ಹೊರತರುವ ಮೂಲಕ ಹೊಸ ದಾಖಲೆ ಬರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಮತ್ತೊಬ್ಬ ಮಾಜಿ ಯೋಧ ಹಾಗೂ ಸಮಾಜ ಸೇವಕ ನಂದಿನೆರವಂಡ ಸಜನ್ ಪೂವಣ್ಣ ಮಾತನಾಡಿ, ಎಲ್ಲರನ್ನು ನಗಿಸುವ ಕಾರ್ಯ ಸುಲಭದ ಮಾತಲ್ಲ. ಅದೊಂದು ಅದ್ಭುತ ಕಲೆ. ಇದೇ ಕಾರಣಕ್ಕೆ ತನ್ನ ತಾಯಿಯ ಹೆಸರಿನಲ್ಲಿ ಪುಸ್ತಕ ಬಿಡುಗಡೆಗೆ ಸಹಕಾರ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕೊಡವ ಪುಸ್ತಕಗಳಿಗೆ ಹೆಚ್ಚು ಪ್ರೋತ್ಸಾಹ ದೊರಕುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ.ಬಿ.ಅಯ್ಯಪ್ಪ, ಮಾರ್ಚ್ ಅಂತ್ಯದೊಳಗೆ ಕೂಟದ ವತಿಯಿಂದ ಇನ್ನೂ ೧೭ ಪುಸ್ತಕಗಳು ಬಿಡುಗಡೆಯಾಗಲಿದ್ದು, ಆ ಮೂಲಕ ಒಟ್ಟು ೧೦೦ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ. ಮಕ್ಕಡ ಕೂಟ ಈಗಾಗಲೇ ಪ್ರಕಟಿಸಿರುವ ೮೨ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ೧೯೬೫ರ ಯುದ್ಧ ಹಾಗೂ ಕೊಡಗಿನ ಮಹಾವೀರ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯರವರ ಬಗ್ಗೆ ಜೀವನಾಧರಿತ ಬಾಲಿವುಡ್ ಸಿನಿಮಾ ಚಿತ್ರೀಕರಣಕ್ಕೆ ತಯಾರಿ ಹಂತದಲ್ಲಿದೆ ಎಂದರು.
ಕೊಡವ ಸಾಂಸ್ಕೃತಿಯ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಹಾಗೂ ಆಸಕ್ತಿಯನ್ನು ನಿರಂತರವಾಗಿ ಮೂಡಿಸಲಾಗುತ್ತಿದೆ. ಮಕ್ಕಳು ಕೊಡವ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ ಎನ್ನುವ ಹಿರಿಯರ ಟೀಕೆಯನ್ನು ದೂರ ಮಾಡಿ ಹಿರಿಯರೇ ಅಚ್ಚರಿ ಪಡುವಂತ ಕಾರ್ಯಕ್ರಮಗಳನ್ನು ಕೂಟದ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ದಕ್ಷಿಣ ಭಾರತದ ಮೊದಲ ಜಾನಪದ ಕೃತಿಯಾಗಿರುವ ಪಟ್ಟೋಲೆ ಪಳಮೆಯನ್ನು ಹಂಚುತ್ತಿದೆ. ಆ ಮೂಲಕ ಕೊಡವ ಸಂಸ್ಕೃತಿಯ ಬೆಳವಣಿಗೆಗೂ ಕಾರಣವಾಗಿದೆ. ಮರೆತು ಹೋಗಿದ್ದ ಹಿರಿಯರನ್ನು ನೆನಪು ಮಾಡಿಕೊಡುವುದು, ಅವರ ಜನ್ಮದಿನ ಆಚರಿಸುವುದು, ಅವರ ಪ್ರತಿಮೆಗಳನ್ನು ಅನಾವರಣಗೊಳಿಸುವುದು ಸೇರಿದಂತೆ ಹಲವು ಕಾರ್ಯವನ್ನು ಹಮ್ಮಿಕೊಂಡು ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ತೆನ್ನಿರ ಪೊನ್ನಮ್ಮ ಉತ್ತಪ್ಪ ಹಾಗೂ ಪೊನ್ನಚೆಟ್ಟೀರ ಪ್ರದೀಪ್ ಉಪಸ್ಥಿತರಿದ್ದರು.