ಚಿಕ್ಕಬಳ್ಳಾಪುರ: ನೋಟುಗಳ ಅದಲು ಬದಲಿಗೆ ಹೆಚ್ಚಿನ ಕಮೀಷನ್ ಆಸೆ ತೋರಿಸಿ, ಬಟ್ಟೆ ವ್ಯಾಪಾರಿಗೆ 10 ಲಕ್ಷ ರೂ ವಂಚಿಸಲು ಯತ್ನಿಸಿದ ಪ್ರಕರಣವು ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಪುಂಗನೂರಿನ ಬಟ್ಟೆ ವ್ಯಾಪಾರಿ ಸಿ.ಫಿರ್ಧೋಸ್ ಮಹಮದ್ ವಂಚನೆಗಳೊಗಾದವರು. ಅದೇ ಪುಂಗನೂರಿನ ಬಟ್ಟೆ ವ್ಯಾಪಾರಿಗಳಾದ ರಫೀಕ್, ಸಲೀಂ, ಬಿಲಾಲ್ ಭಾಷ್, ನರಸಿಂಹ ಆರೋಪಿಗಳು. 10 ಲಕ್ಷ ಕೊಟ್ಟರೆ 12.50 ಲಕ್ಷ ರೂ ಕೊಡುವುದಾಗಿ ಹೇಳಿ ನಂಬಿಸಲಾಗಿತ್ತು. ಇದರ ವ್ಯವಹಾರದ ನಡುವೆ ವಂಚನೆಯ ಅರಿವಿನಿಂದಾದ ಬಹಿರಂಗ ಗಲಾಟೆಗೆ ಪ್ರಕರಣವು ಬೆಳಕಿಗೆ ಬಂದಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
* ಪ್ರಕರಣದ ಹಿನ್ನೆಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಬಿಲಾಲ್ ಭಾಷ್ ಬಳಿ ಬ್ಯಾನ್ ಆದ 2000 ನೋಟುಗಳು ಜಾಸ್ತಿ ಇವೆ. ಅವರಿಗೆ 10 ಲಕ್ಷ ರೂಗಳಿಗೆ ಬದಲಿ ನೋಟುಗಳನ್ನು ಕೊಟ್ಟರೆ 2.50 ಲಕ್ಷ ಕಮೀಷನ್ ಕೊಡುತ್ತಾರೆ ಎಂಬುದಾಗಿ ಹೇಳಿ ಆರೋಪಿಗಳಾದ ರಫೀಕ್, ಸಲೀಂ ಗೆಳೆಯ ಫಿರ್ದೋಸ್ ಮಹಮದ್‌ಗೆ ತಿಳಿಸಿದ್ದಾರೆ. ಹಾಗೆಯೇ ವಾಟ್ಸಾಪ್ ಮೂಲಕ ನೋಟುಗಳ ಬಂಡಲ್ ಪೋಟೋ ತೋರಿಸಿ ನಂಬಿಸಿದ್ದಾರೆ. ಇದರಿಂದ ಮೊದಲೇ ಯೋಜಿಸಿದಂತೆ ಭಾನುವಾರ ಚಿಂತಾಮಣಿ ತಾಲೂಕಿನ ಕೈವಾರ ಸಮೀಪದ ಕೈಗಾರಿಕಾ ಪ್ರದೇಶಕ್ಕೆ ಮೂವರು ಹಣದೊಂದಿಗೆ ಬಂದಿದ್ದು ಇದೇ ವೇಳೆ ಮತ್ತೊರ್ವ ಆರೋಪಿ ನರಸಿಂಹ ಮೂಲಕ ಅಪರಿಚಿತರು ಬ್ಯಾಗನ್ನು ನೀಡಿ, ಹೊರಟು ಹೋಗಿದ್ದಾರೆ. ಆದರೆ, ಇದನ್ನು ಪರಿಶೀಲಿಸಿದಾಗ 2 ಸಾವಿರ ಮುಖಬೆಲೆಯ 5 ನೋಟುಗಳು ಮಾತ್ರ ಇರುವುದು ಗೊತ್ತಾಗಿದೆ. ತಳದಲ್ಲಿ ದೇವರ ಪೋಟೋಗಳನ್ನಿಡಲಾಗಿತ್ತು. ಇದರಿಂದ ಫಿರ್ದೋಸ್ ಮಹಮದ್ 10 ಲಕ್ಷ ರೂ ನೀಡಲು ನಿರಾಕರಿಸಿದಾಗ ಗಲಾಟೆಯಾಗಿದೆ. ಆಗ ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಗಳನ್ನು ಹಣದ ಸಮೇತ ವಶಪಡಿಸಿಕೊಂಡಿದ್ದಾರೆ.
* ಹಣ ಕಿತ್ತುಕೊಳ್ಳಲು ಯತ್ನ
ಒಂದು ಹಂತದಲ್ಲಿ ವ್ಯವಹಾರ ಕುದುರಿಸುತ್ತಿದ್ದ ಗೆಳೆಯರೇ ಫಿರ್ದೋಸ್ ಮಹಮದ್‌ರಿಂದ 10 ಲಕ್ಷ ರೂ ಹಣವನ್ನು ಕಸಿದುಕೊಂಡು ಹೋಗಲು ಯತ್ನಿಸಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ಹಣದ ಮಾಲೀಕ, ಸ್ಥಳೀಯರ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಇದೇ ವೇಳೆ ಹೋಗುತ್ತಿದ್ದ ಪೊಲೀಸರು ಜನರ ನೆರವಿನೊಂದಿಗೆ ಆರೋಪಿಗಳನ್ನು ಹಿಡಿದುಕೊಂಡಿದ್ದಾರೆ.