ಜಿಲ್ಲೆ

ಭಾಷೆಯ ಬೆಳವಣಿಯತ್ತ ಗಮನಿಸಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ಯುವಕರು, ಅದರಲ್ಲೂ ಕಾನೂನು ವಿದ್ಯಾರ್ಥಿಗಳು ಭಾಷೆಯ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಮತ್ತು ಸರ್​ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಆಶ್ರಯದಲ್ಲಿ ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದಶಕದಿಂದ ಉತ್ತರ ಭಾರತದ ಭಾಷೆಗಳ ಬೆಳವಣಿಗೆ ಶೇ. 60ರಷ್ಟಿದ್ದರೆ, ನಮ್ಮ ಕನ್ನಡ ಭಾಷೆ ಬೆಳವಣಿಗೆ ಶೇ. 3.6.ಇದು ಗಂಭೀರ ವಿಷಯ. ಹೀಗಾಗಿ ಯುವಕರು ಗಮನಹರಿಸಬೇಕು. ವಕೀಲರಾಗಿದವರು ತಮ್ಮ ತಮ್ಮ ಪರಿಸರದ ಭಾಷೆ ಕನ್ನಡದ ಮೇಲೆ ಹಿಡಿತವಿದ್ದರೆ ಮಾತ್ರ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಬಲ್ಲರು ಎಂದರು.
ವಚನ ಸಾಹಿತ್ಯ ಮತ್ತು ಸಂವಿಧಾನ ಕುರಿತು ಡಾ. ಕೆ.ಎಸ್​. ಕೋರಿಶೆಟ್ಟರ ಮಾತನಾಡಿ, ಅನುಭವ ಮಂಟಪದ ಮೂಲಕ ನ್ಯಾಯಾಲಯದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು 12ನೇ ಶತಮಾನದ ವಚನಕಾರರು. ಮಹಿಳೆಯರಿಗೆ, ಕೆಳ ವರ್ಗದವರಿಗೆ ಸರಿ ಸಮಾನ ಸ್ಥಾನಮಾನ ನೀಡಿದ ಶ್ರೇಯಸ್ಸು ವಚನಕಾರರದ್ದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ದತ್ತಿದಾನಿಗಳ ಕಾರ್ಯ ಸ್ಮರಿಸಿದರು. ಡಾ.ಎಸ್​.ಆರ್​. ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಚನ್ನಬಸಪ್ಪ ಮಾಳವಾಡ, ಎಸ್​.ಜ, ಸಂಗಮೇಶ ಸಜ್ಜನರ, ಡಾ. ಜಿನದತ್ತ ಹಡಗಲಿ, ಡಾ. ಎಸ್​.ಎಸ್​. ದೊಡಮನಿ, ಸೋಮಶೇಖರ ಇಟಗಿ, ಡಾ. ಆರ್​.ಬಿ. ಖಾದೀರನಾಯಕರ, ಎಸ್​.ಬಿ. ಕೊಡ್ಲಿ, ಶಿವಶಂಕರ ಹಿರೇಮಠ, ಪ್ರಮೀಳಾ ಜಕ್ಕನ್ನವರ, ಇತರರು ಇದ್ದರು.
ರೇವಣ್ಣ ಶಿವಪುರೆ ಸ್ವಾಗತಿಸಿದರು. ಪ್ರೊ. ಕೆ.ಎಸ್​.ಕೌಜಲಗಿ ಪ್ರಾಸ್ತಾವಿಕ ಮಾತನಾಡಿದರು. ಎಚ್​. ದೇವರಾಜ ವಂದಿಸಿದರು.