ಬೆಳಗಾವಿ: ಕರೊನಾ ವೈರಸ್ ತಡೆಗಟ್ಟಲು ಜೀವ ಪಣಕ್ಕಿಟ್ಟು ಹಗಲಿರುಳು ಶ್ರಮಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸಿಬ್ಬಂದಿಗೆ ಸಮರ್ಪಕವಾಗಿ ಆರೋಗ್ಯ ಭಾಗ್ಯ ಲಭಿಸುತ್ತಿಲ್ಲ.
ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ದಿನದಿಂದ ಕರೊನಾ ವೈರಸ್ ತಡೆಗಟ್ಟಲು ಬೆಳಗಾವಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ 10 ಸಾವಿರಕ್ಕೂ ಹೆಚ್ಚು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ 1,840ಕ್ಕೂ ಅಧಿಕ ಗ್ರಾಪಂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಲಾಕ್‌ಡೌನ್ ಜಾರಿಯಾಗಿ 38 ದಿನ ಕಳೆದರೂ ಈವರೆಗೆ ಕರೊನಾ ವಾರಿಯರ್ಸ್‌ಗೆ ಆಯಾ ಸ್ಥಳೀಯ ಆಡಳಿತ ಮಂಡಳಿಗಳು ಕೇವಲ ಮಾಸ್ಕ್ ಮಾತ್ರ ವಿತರಣೆ ಮಾಡಿವೆ. ಆದರೆ, ಆರೋಗ್ಯ ಇಲಾಖೆಯು ಗ್ಲೌಸ್, ಪಿಪಿಇ ಕಿಟ್ ಸೇರಿ ಇನ್ನಿತರ ಆರೋಗ್ಯ ರಕ್ಷಕ ಸಲಕರಣೆ ನೀಡಿಲ್ಲ. ಕೆಲವು ಕಡೆ ಆರೋಗ್ಯ ತಪಾಸಣೆ ಕಾರ್ಯವೂ ಸರಿ ಯಾಗಿ ನಡೆಯುತ್ತಿಲ್ಲ ಎಂದು ವಾರಿಯರ್ಸ್ ಆರೋಪಿಸಿದ್ದಾರೆ.
54 ಜನರಿಗೆ ಸೋಂಕು: ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ 54 ಜನರಲ್ಲಿ ಕರೊನಾ ವೈರಸ್ ದೃಢಪಟ್ಟಿದೆ. ರಾಯಬಾಗ ತಾಲೂ ಕಿನ ಕುಡಚಿ ಪಟ್ಟಣದಲ್ಲಿ 18, ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ 25, ಯಳ್ಳೂರ ಹಾಗೂ ಪೀರನವಾಡಿಯಲ್ಲಿ ತಲಾ 1, ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಕ್ಯಾಂಪ್ ಪ್ರದೇಶದಲ್ಲಿ-4, ಆಮನ್ ನಗರ, ಸಂಗಮೇಶ್ವರ ನಗರ, ಆಝಾದ್ ನಗರದಲ್ಲಿ ತಲಾ 1 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.
ಕರೊನಾ ಪಾಸಿಟಿವ್ ಇರುವ ಜಾಗವನ್ನು ಜಿಲ್ಲಾಡಳಿತ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿದೆ. ಜತೆಗೆ ಸುತ್ತಮುತ್ತಲಿನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿರುವ ರಸ್ತೆಯ ಮಾರ್ಗಗಳನ್ನೆಲ್ಲ ಸಂಪೂರ್ಣ ಬಂದ್ ಮಾಡಿದೆ. ಆದರೆ, ಪಾಸಿಟಿವ್ ಪ್ರಕರಣ ಕಂಡುಬಂದ ಪ್ರದೇಶದಲ್ಲೇ ಕೆಲಸ ಮಾಡುತ್ತಿರುವ ನಾವುಗಳು ಆರೋಗ್ಯ ಸಲಕರಣೆಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಕರೊನಾ ವಾರಿಯರ್ಸ್ ದೂರಿದ್ದಾರೆ.
ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್, ಗ್ಲೌಸ್ ಹಾಗೂ ಪಿಪಿಇ ಕಿಟ್ ನೀಡುವಂತೆ ಜಿಪಂ, ಜಿಲ್ಲಾಡಳಿತಕ್ಕೆ ವಿನಂತಿಸಿದ್ದೇವೆ. ಆದರೆ, ಈವರೆಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ. | ವಿ.ಆರ್. ಕುಲಕರ್ಣಿ ಸಿಐಟಿಯು ಜಿಲ್ಲಾಧ್ಯಕ್ಷ
ಕರೊನಾ ವೈರಸ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್, ಗ್ಲೌಸ್ ಸೇರಿ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಲ್ಲದೆ, ಆಯಾ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಕೆಲವು ಕಡೆ ಕಾರ್ಯಕರ್ತೆಯರಿಗೆ ರಕ್ಷಣೆಯನ್ನೂ ನೀಡಲಾಗಿದೆ. | ಡಾ.ಎಸ್.ಬಿ.ಬೊಮ್ಮನಹಳ್ಳಿ ಜಿಲ್ಲಾಧಿಕಾರಿ