ಜಿಲ್ಲೆ

ರೈತ ಫಲಾನುಭವಿಗಳಿಗೆ ಸೌಲಭ್ಯ ನೀಡುತ್ತಿಲ್ಲ: ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿ ಆರೋಪ

ಮೈಸೂರು: ರೈತರಿಗೆ ಸಂಬಂಧಿಸಿದ ದಾಖಲೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನಿಜವಾದ ಫಲಾನುಭವಿಗಳಿಗೆ ಅಧಿಕಾರಿಗಳು ನೀಡುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬ್ಯಾತಹಳ್ಳಿ ಮಾದಪ್ಪ ಮನವಿ ಮಾಡಿದರು.
ಜಿಲ್ಲೆಯ ಕಂದಾಯ, ತೋಟಗಾರಿಕೆ, ವಿದ್ಯುತ್, ನೀರಾವರಿ ಇಲಾಖೆಗಳಲ್ಲಿ ಕೆಳ ಹಂತದ ಅಧಿಕಾರಿಗಳು ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ರೈತರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಹೋದಲ್ಲಿ ಯಾರೂ ಸಿಗುತ್ತಿಲ್ಲ. ಸಭೆ, ಹೊರಗೆ ಹೋಗಿದ್ದಾರೆ ಎನ್ನುವ ಉತ್ತರವೇ ಬರುತ್ತಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿ ಇತ್ತ ಗಮನ ಹರಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಅಂತರ್ಜಲ ಹೆಚ್ಚಿಸಲು ರೈತರು, ಆಲ, ಹತ್ತಿ, ಮಾವು, ಹಲಸು, ಬೇವು, ಮತ್ತಿ, ನಂದಿ, ಇಪ್ಪೆ, ಬೇಲ ಮೊದಲಾದ ಗಿಡಗಳನ್ನು ನೆಡಬೇಕು. ಇದರಿಂದಾಗಿ ಪ್ರಾಣಿ, ಪಕ್ಷಿಗಳಿಗೂ ಆಹಾರ ದೊರಕುತ್ತದೆ. ರೈತ ಯುವಕರ ಮದುವೆಗೆ ಸೂಕ್ತ ವಧು ಸಿಗದೇ ಸಮಸ್ಯೆಯಾಗಿದೆ. ಆದ್ದರಿಂದ ಕೃಷಿ ಮಾಡುವವರಿಗೂ ಗೌರವಯುತ ಆದಾಯ ಬರುವಂತೆ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಧನಗಳ್ಳಿ ಕೆಂಡಗಂಡಸ್ವಾಮಿ, ಸೋಮಣ್ಣ, ನಾಗೇಂದ್ರ ಸ್ವಾಮಿ ಇದ್ದರು.