ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದರು. 
ಜಿಲ್ಲೆ

ಭಯೋತ್ಪಾದಕರು ಮಾತ್ರವಲ್ಲ, ಅಪಪ್ರಚಾರ ಮಾಡುವವರೂ ದೇಶದ್ರೋಹಿಗಳೇ: ಸಿ.ಟಿ.ರವಿ

ನವೀನ ಬಿ.ಎಂ

ಶಿವಮೊಗ್ಗ: ಇಡೀ ಜಗತ್ತು ಭಾರತಕ್ಕೆ ಬಂದು ಹೊಗಳುತ್ತಿದ್ದರೆ, ಎಐಸಿಸಿ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತವನ್ನು ತೆಗೆಳುತ್ತಿದ್ದಾರೆ. ಭಯೋತ್ಪಾದಕರು ಮಾತ್ರ ರಾಷ್ಟ್ರದ್ರೋಹಿಗಳಲ್ಲ. ಭಾರತದ ವಿರುದ್ಧ ಅಪಪ್ರಚಾರ ಮಾಡುವವರೂ ದೇಶದ್ರೋಹಿಗಳು. ಆ ಸಾಲಿಗೆ ರಾಹುಲ್ ಗಾಂಧಿ ಸೇರದಿರಲಿ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ-20 ಶೃಂಗಸಭೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಆದರೆ ಎಲ್ಲೋ ವಿದೇಶದಲ್ಲಿ ಕುಳಿತು ರಾಹುಲ್ ಗಾಂಧಿ ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿ ಇನ್ನೂ ಯಾವುದು ಅಂತಿಮವಾಗಿಲ್ಲ. ನಾನೂ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಅದಕ್ಕಿಂತ ಹೆಚ್ಚಿನ ಮಾಹಿತಿ ನನ್ನ ಬಳಿ ಇಲ್ಲ. ನೀರಿಗೆ ಬಂದವಳು ಊರಿಗೆ ಬರಲೇಬೇಕು. ಚರ್ಚೆ ಆದರೆ ಬಹಿರಂಗ ಆಗಲೇಬೇಕು. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ವರಿಷ್ಠರು ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ನಾವೆಲ್ಲರೂ ವರಿಷ್ಠರ ತೀರ್ಮಾನಕ್ಕೆ ಬದ್ಧರಿದ್ದೇವೆ ಎಂದರು.
ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಗಮನ ಹರಿಸಿದೆ. 28 ಕ್ಷೇತ್ರಗಳಲ್ಲೂ ಪಕ್ಷ ಸಂಘಟನೆ ನಡೆಯುತ್ತಿದೆ. ವಿರೋಧಪಕ್ಷ ನಾಯಕ, ರಾಜ್ಯಾಧ್ಯಕ್ಷ ನೇಮಕದ ನಿರ್ಣಯವನ್ನು ಕಾರಣವಿಲ್ಲದೆ ಮುಂದೂಡಿಲ್ಲ. ಆ ಬಲವಾದ ನಂಬಿಕೆ ನನ್ನದು. ಸೇನಾನಿ ಇಲ್ಲದೆಯೂ ಯುದ್ಧ ಗೆದ್ದ ಉದಾಹರಣೆ ಇದೆ. ಆದರೆ ಸೇನಾನಿ ಬೇಕೇ ಬೇಕು ಎಂದರು.