ಜಿಲ್ಲೆ

ಹುಟ್ಟೂರು ಸಂತೇಶಿವರ ಕೆರೆಗೆ ನೀರು ಹರಿಸುವ ಪ್ರಯತ್ನಕ್ಕೆ ಸಿಗದ ಫಲ: ಖ್ಯಾತ ಸಾಹಿತಿ ಭೈರಪ್ಪ ಅಸಮಾಧಾನ

ಬೆಂಗಳೂರು: ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ತಮ್ಮ ಹುಟ್ಟೂರು ಕೆರೆಗೆ ನೀರು ಹರಿಸಬೇಕು ಎನ್ನುವ ನಿಟ್ಟಿನಲ್ಲಿ ಸತತವಾಗಿ ಮಾಡಿದ್ದ ಪ್ರಯತ್ನಕ್ಕೆ ಇನ್ನೂ ಫಲ ಸಿಕ್ಕಿಲ್ಲ. ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಕೆರೆಗೆ ಪೈಪ್​ಲೈನ್ ಮೂಲಕ ನೀರು ಹರಿಸಿ, ಕೆರೆ ತುಂಬಿಸಿಕೊಡಬೇಕು ಎಂದು ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಖುದ್ದು ಭೈರಪ್ಪ ಅವರೇ ಭೇಟಿ ಮಾಡಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುವಂತೆ ಆದೇಶಿಸಲಾಗಿತ್ತು.

ಹೇಮಾವತಿ ನಾಲೆಯಿಂದ ಪೈಪ್​ಲೈನ್ ಮೂಲಕ ಸಂತೇಶಿವರ ಕೆರೆಗೆ ನೀರು ಹರಿ ಸಲು ಸುಮಾರು 25 ಕೋಟಿ ವೆಚ್ಚದಲ್ಲಿ ಯೋಜನೆ ಯನ್ನು ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗಿದ್ದರೂ, ಅದಕ್ಕೆ ಇನ್ನೂ ಹಣಕಾಸು ಇಲಾಖೆ ಒಪ್ಪಿಗೆ ಮಾತ್ರ ಸಿಗಲೇ ಇಲ್ಲ. ಡಿಪಿಆರ್ ಮಾಡಿದ್ದು, ತಾಂತ್ರಿಕ ಸಮಿತಿಯ ಒಪ್ಪಿಗೆಗೆ ಕಳುಹಿಸಲಾಗಿದ್ದರೂ, ಅಲ್ಲಿಯೂ ಈ ಯೋಜನೆಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಸಂತೇಶಿವರ ಕೆರೆ ತುಂಬುವುದರಿಂದ ದುಗ್ಗೇನಹಳ್ಳಿ, ಯಾಚನಘಟ್ಟ, ಚನ್ನೇನಹಳ್ಳಿ, ಹೊಸಳ್ಳಿ, ಗಂಗೇನಹಳ್ಳಿ, ಗಂಜಲಘಟ್ಟ ಸೇರಿದಂತೆ ಹತ್ತು ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ. ಅಷ್ಟೆ ಅಲ್ಲ, ಆ ಭಾಗದ ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಸಯಲಿದೆ ಎನ್ನುವ ಹಿನ್ನೆಲೆಯಲ್ಲಿ ಈ ಕೆರೆಗೆ ನೀರು ಹರಿಸಲೇಬೇಕು ಎಂಬ ಒತ್ತಾಸೆಯಿಂದ ಭೈರಪ್ಪ ಪ್ರಯತ್ನ ನಡೆಸಿದ್ದರು. ಭೈರಪ್ಪ ಅವರ ಕೋರಿಕೆಗೆ ಪ್ರಾರಂಭದಲ್ಲಿ ಮನ್ನಣೆ ನೀಡಿ ಯೋಜನೆ ರೂಪಿಸಿ ಮುಂಚೂಣಿಗೆ ತಂದ ಸರ್ಕಾರ, ಈಗ ಕೋವಿಡ್ ನೆಪದಲ್ಲಿ ಕಾಲಾಹರಣ ಮಾಡುತ್ತಿದೆ. ಈ ಯೋಜನೆಗೆ ಬೇಕಾದ ಹಣಕಾಸು ಇಲಾಖೆ ಒಪ್ಪಿಗೆಯನ್ನು ಸರ್ಕಾರ ನೀಡಿಲ್ಲ ಎನ್ನುವುದು ಭೈರಪ್ಪ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಕೈಬಿಟ್ಟ ಗ್ರಾಮದ ಅಭಿವೃದ್ಧಿ: ಕಳೆದ ವರ್ಷ ಬಜೆಟ್​ನಲ್ಲಿ ಸಂತೆಶಿವರ ಗ್ರಾಮದ ಸಮಗ್ರ ಅಭಿವೃದ್ಧಿಗೆ 5 ಕೋಟಿ ರೂ.ಗಳನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಅಭಿವೃದ್ಧಿ ಮಅಡಲು ನಿರ್ಧರಿಸಲಾಗಿತ್ತು. ಆದರೆ ಆ ನಂತರ ಯೋಜನೆಯನ್ನೇ ಸರ್ಕಾರ ಕೈಬಿಟ್ಟಿರುವುದು ಸರ್ಕಾರದ ದಾಖಲೆಗಳಿಂದಲೇ ಕಂಡು ಬಂದಿದೆ.

ಸಾಹಿತಿ ಎಸ್.ಎಲ್.ಭೈರಪ್ಪ ಅವರ ಒತ್ತಾಸೆಯಂತೆ ಸಂತೇಶಿವರ ಕೆರೆಗೆ ಹೇಮಾವತಿ ನಾಲೆಯಿಂದ ಪೈಪ್​ಲೈನ್ ಮೂಲಕ ನೀರು ಹರಿಸುವ ಯೋಜನೆಯನ್ನು ರೂಪಿಸಿದ್ದು, ಸರ್ಕಾರದ ಅನುಮತಿಗಾಗಿ ಕಳುಹಿಸಿಕೊಡಲಾಗಿದೆ. ಅದಕ್ಕೆ ತಾಂತ್ರಿಕ ಸಮಿತಿ ಮತ್ತು ಹಣಕಾಸು ಇಲಾಖೆ ಒಪ್ಪಿಗೆ ಬಾಕಿ ಇದ್ದು, ಬಳಿಕ ಸಂಪುಟದ ಮುಂದೆ ಬರಬೇಕಿದೆ.

| ಸಿ.ಎನ್.ಬಾಲಕೃಷ್ಣ ಶಾಸಕರು, ಶ್ರವಣಬೆಳಗೊಳ ಕ್ಷೇತ್ರ.

ಕ್ಲಬ್ ಹೌಸ್​ನಲ್ಲಿ ಪ್ರಸ್ತಾಪ: ವಿಜಯವಾಣಿ ಕ್ಲಬ್ ಹೌಸ್​ನಲ್ಲಿ ಮಾತನಾಡುವಾಗ ಹುಟ್ಟೂರು ಸಂತೇಶಿವರ ಕೆರೆಗೆ ನೀರು ಹರಿಸುವ ಯೋಜನೆ ಯನ್ನು ಇನ್ನೂ ಅನುಷ್ಠಾನಕ್ಕೆ ತಾರದೆ ಸರ್ಕಾರ ನಿರ್ಲಕ್ಷಿಸಿರುವ ಬಗ್ಗೆ ಎಸ್.ಎಲ್.ಭೈರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.