ಸೊರಬ: ಶಿಕ್ಷಕರ ಸಭೆ-ಸಮಾರಂಭ ಕೈಗೊಳ್ಳಲು ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣಗೊಂಡ ಗುರುಭವನ ಸುಸಜ್ಜಿತವಾಗಿದ್ದರೂ ವಾಹನಗಳ ಪಾರ್ಕಿಂಗ್ ಸಮಸ್ಯೆ ಬಿಗಡಾಯಿಸಿದೆ.
ಪಟ್ಟಣದ ಚಾಮರಾಜ ಪೇಟೆಯಲ್ಲಿ ಗೋವಿಂದ ರಾವ್ ಎಂಬುವವರು ನಿವೇಶವನ್ನು ನೀಡಿದ್ದು 1988-89ನೇ ಸಾಲಿನಲ್ಲಿ ನಿರ್ಮಾಣವಾದ ಗುರುಭವನವನ್ನು ಶಿಕ್ಷಕರ ಕಟ್ಟಡ ನಿಧಿ ಮತ್ತು ಶಿಕ್ಷಕರ ವಂತಿಕೆಯಿಂದ ನಿರ್ಮಿಸಲಾಯಿತು. ಅಂದಿನ ಕಾಲದಲ್ಲಿ ಅನೇಕ ಶುಭ ಕಾರ್ಯಗಳಿಗೆ ಗುರುಭವನ ಸಾಕ್ಷಿಯಾಗಿದೆ. ಈಗಲೂ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಇದು ಮೂರೂವರೆ ದಶಕದ ಹಿಂದಿನ ಸೌಲಭ್ಯಕ್ಕೆ ತಕ್ಕಂತೆ ಇದೆ. ಬದಲಾದ ಸನ್ನಿವೇಶದಲ್ಲಿ ಗುರುಭವನದಲ್ಲಿ ಸಭೆ-ಸಮಾರಂಭಕ್ಕೆ ಆಗಮಿಸುವವರಿಗೆ ಪಾರ್ಕಿಂಗ್ ಸಮಸ್ಯೆ ಎದುರಿಸುವಂತಾಗಿದೆ.
2007-08ನೇ ಸಾಲಿನಲ್ಲಿ ಗುರುಭವನಕ್ಕೆ ಅಗತ್ಯವಿದ್ದ ಊಟದ ಕೋಣೆಯನ್ನು ನಿರ್ಮಾಣ ಮಾಡಲಾಗಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಹೊಂದಿದ್ದರೂ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ಶಿಕ್ಷಕ ಸಮೂಹು ಹೆಚ್ಚಿದ್ದು ಎಲ್ಲರೂ ಒಂದಡೆ ಸೇರಲು ಸಾಧ್ಯವಾಗುತ್ತಿಲ್ಲ. ಕೇವಲ ಶಿಕ್ಷಕರ ಸಂಘದ ಪದಾಧಿಕಾರಿಗಳು ಸಭೆ - ಸಮಾರಂಭಕ್ಕೆ ಸೀಮಿತವಾದಂತೆ ಗೋಚರಿಸುತ್ತಿದೆ. ದೊಡ್ಡ ಪ್ರಮಾಣದ ಕಾರ್ಯಕ್ರಮ ನಡೆಯಬೇಕಾದರೆ ಮೈದಾನ ಅಥವಾ ರಂಗಮಂದಿರವನ್ನು ಆಶ್ರಯಿಸುವಂತಾಗಿದೆ ಎನ್ನುತ್ತಾರೆ ಶಿಕ್ಷಕರು.