ಬೀದರ್: ವಕ್ಫ್ ವಿವಾದ ಹಿನ್ನಲೆಯಲ್ಲಿ (Waqf Board Issue)ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ತಂಡ ಇದೀಗ ಸೋಮವಾರ ಬೀದರ್ ಜಿಲ್ಲೆಗೆ ಭೇಟಿ ನೀಡಿದೆ. ಈ ಮುಂಚೆ ನಗರದ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಧರ್ಮಾಪುರ ಗ್ರಾಮಕ್ಕೆ ತೆರಳಿ ರೈತರಿಂದ ಸಮಸ್ಯೆ ಆಲಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಯತ್ನಾಳ್, ಎಲ್ಲೆಲ್ಲಿ ಮುಸ್ಲಿಂ ಜಿಲ್ಲಾಧಿಕಾರಿಗಳಿದ್ದರು ಅಲ್ಲಿ ವಕ್ಫ್ ಅಂತ ಮಾಡಿದ್ದಾರೆ. ನಮ್ಮ ವಿಜಯಪುರ ಜಿಲ್ಲೆಯಲ್ಲಿ ಜಾಫರ್ ಅನ್ನೋ ಅಧಿಕಾರಿ ಬಂದು ಇಡೀ ಊರನ್ನೇ ವಕ್ಫ್ ಅಂತ ಮಾಡಿದ್ದಾರೆ. ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಮಹರ್ಷಿ ವಾಲ್ಮೀಕಿ ಜಾಗ, ಮನೆಗಳು, ದೇವಸ್ಥಾನಗಳು, ಜತೆಗೆ ಆಳಂದದಲ್ಲಿ ಪೊಲೀಸ್ ಸ್ಟೇಷನ್, ಕ್ವಾಟ್ರಸ್ ಎಲ್ಲವೂ ವಕ್ಫ್ ಅಂತ ಮಾಡಿದ್ದಾರೆ ಎಂದ ಅವರು, ಹೀಗಾಗಿ, ಇಡೀ ರಾಜ್ಯದಲ್ಲಿ ತಂಡ ಮಾಡಿದ್ದೇವೆ, ಜನಜಾಗೃತಿ ಮಾಡುತ್ತಿದ್ದೇವೆ. ಬರೀ ತಿದ್ದುಪಡಿ ಅಲ್ಲ, ಇಡೀ ವಕ್ಫ್ ಬೋರ್ಡನ್ನೇ ಭಾರತದಿಂದ ತೆಗೆದುಹಾಕಬೇಕು. ಒಂದೇ ಒಂದು ಮನೆಗೆ ಕೈ ಹಾಕಿದ್ರೆ ಪರಿಣಾಮ ಸರಿ ಇರೋದಿಲ್ಲ ಎಂದು ಯತ್ನಾಳ್ ಎಚ್ಚರಿಕೆ ಕೊಟ್ಟರು.
ಸದ್ಯ ಅನೇಕ ಇಲಾಖೆಗಳಿಗೆ ಅಧಿಕಾರಿಗಳಿಲ್ಲ, ಇದನ್ನೆ ಬಳಸಿಕೊಂಡಿರುವ ವಕ್ಫ್‌ನಲ್ಲಿರೋ ಅಧಿಕಾರಿಗಳು ಸರ್ಕಾರಿ ಜಾಗ ಸೇರಿ, ಕಂಡ ಜಾಗವನ್ನೆಲ್ಲಾ ಟ್ರಿಬ್ಯುನಲ್ ಮೂಲಕ ವಕ್ಫ್ ಆಸ್ತಿ ಅಂತ ಮಾಡಿಕೊಳ್ತಿದ್ದಾರೆ. ಟ್ರಿಬ್ಯುನಲ್‌ನಲ್ಲಿ ಇರೋರೆಲ್ಲಾ ಮುಸ್ಲಿಮರೇ ಆಗಿದ್ದು, ಅವರು ವಕ್ಫ್ ಬೋರ್ಡ್ ವಿರುದ್ಧ ತೀರ್ಪು ಕೊಡಲು ಸಾಧ್ಯವಾ ಎಂದು ಪ್ರಶ್ನಿಸಿದರು.
ಈ ವೇಳೆ ಶಾಸಕ ರಮೇಶ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕ ಕುಮಾರ ಬಂಗಾರಪ್ಪ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಇತರರಿದ್ದರು.