ಜಿಲ್ಲೆ

ಬದ್ಧತೆ ಇರುವ ಪ್ರಾಧ್ಯಾಪಕರು ಸಿಗುತ್ತಿಲ್ಲ: ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜು ಕಳವಳ

ಮೈಸೂರು: ಪ್ರಸ್ತುತ ದಿನಗಳಲ್ಲಿ ಓದಿ ವಿದ್ಯಾವಂತರಾಗಿ ದೇಶ ಕಟ್ಟಲು ಮುಂದಾಗುವ ವಿದ್ಯಾರ್ಥಿಗಳಿಗೆ ಒಳ್ಳೆಯ ಪ್ರಾಧ್ಯಾಪಕರು ಸಿಗುತ್ತಿಲ್ಲ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಆಯೋಜಿಸಿರುವ ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳ 45 ದಿನಗಳ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಅಧ್ಯಾಪಕರಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಅಧ್ಯಾಪಕರ ಗುಣಮಟ್ಟ ಕಳೆದುಕೊಂಡರೆ ದೇಶದ ಯುವಕರ ಪರಿಸ್ಥಿತಿ ಏನಾಗಬಹುದು. ದೇಶದ ಯುವಕರು ಕಷ್ಟದ ಪರಿಸ್ಥಿತಿ ದಾಟುತ್ತಿದ್ದಾರೆ. ಎಲ್ಲರೂ ಪದವಿ ಪಡೆದಿದ್ದಾರೆ. ಆದರೆ ಕೆಲಸ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಅರಿವನ್ನು ವಿಸ್ತಾರ ಮಾಡುವವನೇ ಗುರು. ಆ ಗುರುವಿನ ಸ್ಥಾನ ತುಂಬುವ ಅಧ್ಯಾಪಕನು ನಿಷ್ಠೆಯಿಂದ ಪ್ರಾಮಾಣಿಕವಾಗಿರಬೇಕು. ಓದಿ ಯುವಕರೇ ಓದಿ ನಿಮ್ಮ ಜ್ಞಾನ ವಿಸ್ತಾರಕ್ಕಾಗಿ ಓದಿ, ನಿಮ್ಮ ಕನಸು ನನಸಾಗಲು ಓದಿ. ಓದು ಎಂಬುದು ನಿರಂತರವಾಗಿರಬೇಕು ಎಂದು ಹೇಳಿದರು.
ಏಕೀ ಸುಲ್ತಾನ್: ದೇಶ ಕಟ್ಟುವ ಯುವಕರಿಗೆ ಒಳ್ಳೆಯ ಪ್ರಾಧ್ಯಾಪಕರು ಸಿಗದೇ ನೊಂದಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆ ಏಕೀ ಸುಲ್ತಾನ್ ಎಂಬಾಂತಾಗಿದೆ. ನೂರಾರು ವಿದ್ಯಾರ್ಥಿಗಳನ್ನು ಕೋಣೆಯೊಳಗೆ ಕೂಡಾಕಿಕೊಂಡು ಅವರ ಅಭಿರುಚಿಗೆ ಮನ್ನಣೆ ಇಲ್ಲದಾಗಿದೆ. ನೀವೆಲ್ಲರೂ ಮುಂದೆ ಅತ್ಯುನ್ನತ ಪ್ರಾಧ್ಯಾಪಕರಾಗಿ ಸಮಾಜಮುಖಿ ಕೆಲಸಗಳನ್ನ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕರು ಅಧ್ಯಾಪನ ಕುಶಲರಾಗಿರಬೇಕು, ಹೃದಯಸ್ಪರ್ಶಿಯಾಗಿರಬೇಕು. ಉದಾತ್ತ ಧ್ಯೇಯ ನಿಷ್ಠೆಯಿಂದ ಇರಬೇಕು. ಸತ್ಯ ಸಂಶೋಧನೆ ಮಾಡಿ ಪ್ರಚಲಿತ ಘಟನೆಯನ್ನು ವಿದ್ಯಾರ್ಥಿಗಳಿಗೆ ಹೇಳಬೇಕು. ಅಂದವಾದ ವಾಕ್ಯರಚನೆ ಮಾಡುವಂತೆ ಹೇಳಿಕೊಡಬೇಕು ಎಂದು ಪ್ರೊ.ಸಿ.ಎಂ.ತ್ಯಾಗರಾಜು ಹೇಳಿದರು.
ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಗುರಿಮುಟ್ಟುವವರೆಗೆ ನಿಲ್ಲದಿರಿ. ತಮ್ಮ ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡುವ ಗುರಿಗಳನ್ನು ಹೊಂದಬೇಕು ಹಾಗೂ ಆ ಗುರಿ ಸಾಧನೆಯ ಹಾದಿಯಲ್ಲಿ ಯಾವುದೇ ಅಡೆ ತಡೆಗಳು ಬಂದರೂ ಎದೆಗುಂದದೇ, ತಮ್ಮ ನಿರೀಕ್ಷಿತ ಗುರಿ ತಲುಪುವವರೆಗೂ ಪ್ರಯತ್ನ ಮುಂದುವರೆಸಬೇಕು ಎಂದು ಸಲಹೆ ನೀಡಿದರು.
ಯುಜಿಸಿ-ನೆಟ್ ಕೆ-ಸೆಟ್ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳು ಬಹಳ ಶ್ರದ್ಧೆ ಉಳ್ಳವರು ಹಾಗೂ ತಮ್ಮ ಗುರಿಯನ್ನು ನಿಗದಿಪಡಿಸಿಕೊಂಡಿರುವವರು. ಜತೆಗೆ ಪ್ರಾಮಾಣಿಕ ವಿದ್ಯಾರ್ಥಿಗಳು ಎಂದು ಹೇಳಿದರು.
ಕೆಎಸ್‌ಒಯುನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರದ ವ್ಯವಸ್ಥೆಯು ಉತ್ತಮವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಅತ್ಯುನ್ನತ ಪ್ರಾಧ್ಯಾಪಕರಾಗಬೇಕು ಎಂದು ಹಾರೈಸಿದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರೊ.ಜಿ.ಆರ್‌ಅಂಗಡಿ ಅವರು ತರಬೇತಿ ಅಭ್ಯರ್ಥಿಗಳಿಗೆ ಶುಭಹಾರೈಸಿ, ಪರೀಕ್ಷೆ ಎದುರಿಸುವ ಕುರಿತು ಸಲಹೆ ಹಾಗೂ ಯುಜಿಸಿ -ನೆಟ್, ಕೆ-ಸೆಟ್ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗಿದ್ದ ಹಲವು ಗೊಂದಲಗಳನ್ನು ನಿವಾರಿಸಿಕೊಟ್ಟರು.
ಓದಿನ ಗೀಳು ರೂಢಿಸಿಕೊಳ್ಳಿ:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ವಿದ್ಯಾರ್ಥಿಗಳು ಓದಿನ ಗೀಳನ್ನು ರೂಢಿಸಿಕೊಳ್ಳಬೇಕು. ನೀವೆಲ್ಲಾ ಮುಂದಿನ ದಿನಗಳಲ್ಲಿ ಪ್ರಾಧ್ಯಾಪಕರಾಗುವವರು ನಿಷ್ಠೆಯಿಂದ ನೀವೆಲ್ಲಾ ತರಗತಿಗಳನ್ನು ಬಳಸಿಕೊಂಡು ಮುಂದೆ ಪ್ರಾಧ್ಯಾಪಕರಾಗಿ ದೇಶಕ್ಕೆ ಉತ್ತಮ ಯುವಕರನ್ನು ನೀಡಿ ಎಂದರು.
ಪ್ರಾಧ್ಯಾಪಕರಿಗೆ ವಿದ್ಯಾರ್ಥಿಗಳೇ ತಮ್ಮ ಮಕ್ಕಳಾಗಿರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಪ್ರಾಧ್ಯಾಪಕರಿಗೆ ಗೌರವ ನೀಡಬೇಕು. ನಮ್ಮ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಮ್ಮ ಓದು ನಿರಂತರವಾಗಿರಲಿ. ದೇಶದ ಭವಿಷ್ಯ ನಿರ್ಮಾಣ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.
ಅಧ್ಯಯನ ಕೇಂದ್ರದ ಡೀನ್ ಪ್ರೊ. ರಮಾನಾಥಂ ನಾಯ್ಡು, ಕುಲಪತಿಗಳ ವಿಶೇಷಾಧಿಕಾರಿ ಮಹದೇವ್, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ತರಬೇತುದಾರರಾದ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ. ಕೊಪ್ಪಲ್ ಇತರರು ಇದ್ದರು.