ಸೋಮವಾರಪೇಟೆ : ಬರಹಗಾರ ಹೇಮಂತ್ ಪಾರೇರಾ ಅವರು ರಚಿಸಿರುವ ಒಲವಿನ ಸವಾರಿ ಕಥಾ ಸಂಕಲನ ಮಂಗಳವಾರ ಸಂಜೆ ಬಿಡುಗಡೆಗೊಂಡಿತು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಪುಸ್ತಕ ಬಿಡುಗಡೆ ಮಾಡಿದರು. ನಂತರ ಮಾತನಾಡಿ, ಸಾಹಿತ್ಯ ರಚನೆ ಎಲ್ಲರಿಂದಲೂ ಸಾಧ್ಯವಿಲ್ಲ. ಯಾರಿಗೆ ಸಾಹಿತ್ಯದ ಬಗೆಗಿನ ಆಸಕ್ತಿ ಇರುತ್ತದೆಯೋ ಅಂತಹವರು ಮಾತ್ರ ಸಾಹಿತಿಗಳಾಗಲು ಸಾಧ್ಯ. ಕೊಡಗಿನ ಪರಿಸರ ಸಾಹಿತಿಗಳ ಬರವಣಿಗೆಗೆ ಪೂರಕವಾಗಿದೆ ಎಂದರು.
ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಮಾತನಾಡಿ, ಮೊದಲು ಸಾಹಿತಿಗಳು ಭ್ರಮೆಯಿಂದ ಹೊರಬರಬೇಕು. ವಿಭಿನ್ನ ರೀತಿಯ ದೃಷ್ಟಿಕೋನದಿಂದ ಬರೆಯಬೇಕು. ವಿಮರ್ಶೆಗಳನ್ನು ಅರಗಿಸಿಕೊಂಡು ಬರೆಯಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಜಲಾ ಕಾಳಪ್ಪ ಪುಸ್ತಕ ಪರಿಚಯ ಮಾಡಿದರು. ಲೇಖಕಿ ಎಚ್.ಆರ್.ಪವಿತ್ರಾ, ಲೇಖಕಿ ಮಿಲನಾ ಭರತ್, ಯಡವನಾಡು ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಇದ್ದರು.