ಜಿಲ್ಲೆ

'ಭೆಂಡಿಗೇರಿ' ಅಲ್ಲ 'ಬೆಳಕಿನ'ಕೇರಿ, ಮೃತ್ಯುಂಜಯ ಶ್ರೀಗಳು ಬಣ್ಣನೆ, ಜನಜಾಗೃತಿ ಪಾದಯಾತ್ರೆ- ರುದ್ರಾಕ್ಷಿ ಧಾರಣೆ

ಬೆಳಗಾವಿ: ತಾಲೂಕಿನ ಭೆಂಡಿಗೇರಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಅಖಿಲ ಭಾರತ ಲಿಂಗಾಯತ ಮಹಾಸಭಾ ಬೆಳಗಾವಿ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆ ಮತ್ತು ರುದ್ರಾಕ್ಷಿ ಧಾರಣೆ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಗಜ್ಯೋತಿ ಬಸವಣ್ಣ ಹಾಗೂ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
ಪಾದಯಾತ್ರೆ ಹಿನ್ನೆಲೆಯಲ್ಲಿ ಪ್ರತಿ ಮನೆಯ ಅಂಗಳದ ಮುಂದೆ ಬಿಡಿಸಿದ ರಂಗೋಲಿ ಚಿತ್ತಾರ ಹಾಗೂ ಹೂಗಳಿಂದ  ಸಿಂಗರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗಂದಿಗವಾಡದ ಮೃತ್ಯುಂಜಯ ಶ್ರೀಗಳು ಇದು 'ಭೆಂಡಿಗೇರಿ'ಯಲ್ಲ 'ಬೆಳಕಿನ' ಕೇರಿ ಎಂದು ಬಣ್ಣಿಸಿದರು. ಪ್ರತಿದಿನವೂ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಇದರಿಂದ ಉತ್ತಮ ಆರೋಗ್ಯ ಸಿಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಗೆ ಮರಳಾಗದೆ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.
ಬಸವರಾಜ ರೊಟ್ಟಿ ಮಾತನಾಡಿ, ಇದು ಬಸವನ ಭೆಂಡಿಗೇರಿ ಎಂದರು.
ನಿವೃತ್ತ ಇಂಜಿನಿಯರ್ ಎ.ವೈ. ಬೆಂಡಿಗೇರಿ ಮಾತನಾಡಿ, ಗ್ರಾಮದಲ್ಲಿ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಅವಶ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಗಮನಹರಿಸಬೇಕಿದೆ ಎಂದರು.
ನಾಗರ ಪಂಚಮಿ ನಿಮಿತ್ತ ಶಾಲಾ ಮಕ್ಕಳಿಗೆ ರುದ್ರಾಕ್ಷಿ ಮಠದ ಶ್ರೀಗಳು ಹಾಲು ವಿತರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಶ್ರೀಗಳು ರುದ್ರಾಕ್ಷಿ ಧಾರಣೆ ಮಾಡಿದರು. ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಹಳಿಂಗಳಿ ಕಮರಿ ಮಠದ ಶ್ರೀ ಶಿವಾನಂದ ದೇವರು, ಕುಳವಳ್ಳಿಯ ಶ್ರೀ ಓಂ ಗುರೂಜಿ,  ಬಸವರಾಜ ರೊಟ್ಟಿ, ಮಲ್ಲಯ್ಯ ಹಿರೇಮಠ ಸ್ವಾಮಿಗಳು, ಶಂಕರಯ್ಯ ಸುರುಗಿಮಠ ಸ್ವಾಮಿಗಳು, ಶಿವಾನಂದ ಚಂಡು, ಸಿದ್ದಣ್ಣ ಹಾವನ್ನವರ, ರವೀಂದ್ರ ಮೇಳೇದ, ಸಂತೋಷ ಅಂಗಡಿ, ಶೇಖರ ಮಾಳಾಯಿ, ಪ್ರಕಾಶ ಪಾಟೀಲ, ಬಸವರಾಜ ಡಮ್ಮಣಗಿ, ವಿಕ್ರಮರಾಜ ಡಮ್ಮಣಗಿ, ಮಲ್ಲಪ್ಪ ಕಾದ್ರೊಳ್ಳಿ, ಈರಪ್ಪ ದೊಡಮನಿ, ಗೋಪಾಲ ದೊಡಮನಿ, ಗ್ರಾಮದ ಶಿಕ್ಷಕರು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ನಾಗರಾಜ ಮೇಳೇದ ಸ್ವಾಗತಿಸಿದರು.