ಜಿಲ್ಲೆ

ಅಪಘಾತವಲ್ಲ; ಆತ್ಮಹತ್ಯೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಹೊಸ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದಿರುವುದು ಅಪಘಾತವಲ್ಲ. ಆತ್ಮಹತ್ಯೆ ಎಂಬುದು ಸಿಸಿಟಿವಿ ದೃಶ್ಯದಲ್ಲಿ ಬಹಿರಂಗಗೊAಡಿದೆ. ಬಸ್ ನಿಲ್ದಾಣದಲ್ಲಿ ಸಂಜೆ ವೇಳೆ ಪ್ರಯಾಣಿಕರ ಜನದಟ್ಟಣೆ ಇತ್ತು. ಹಲವರು ಬಸ್‌ಗಳಿಗಾಗಿ ಕಾಯುತ್ತ ನಿಂತಿದ್ದರು. ಈ ವೇಳೆ ಪ್ರಯಾಣಿಕನಂತೆ ನಿಂತಿದ್ದ ವ್ಯಕ್ತಿಯೊಬ್ಬ ಬಸ್ ನಿಲ್ದಾಣದೊಳಗೆ ಬರುತ್ತಿದ್ದಂತೆ ಏಕಾಏಕಿ ಹಿಂದಿನ ಚಕ್ರದಡಿ ಬಿದ್ದಿದ್ದ. ತಲೆಯ ಮೇಲೆ ಬಸ್ ಚಕ್ರ ಹಾಯ್ದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಇದು ಅಪಘಾತ ಎನ್ನಲಾಗಿತ್ತು. ಆದರೆ, ನಿಲ್ದಾಣದಲ್ಲಿದ್ದ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ ಆತ್ಮಹತ್ಯೆ ಎಂಬುದು ಬಹಿರಂಗವಾಗಿದೆ. ಮೃತ ವ್ಯಕ್ತಿ ಒಬ್ಬನೇ ಇದ್ದಿದ್ದರಿಂದ ಹೆಸರು ಮತ್ತು ವಿಳಾಸ ತಿಳಿದುಬಂದಿಲ್ಲ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಠಾಣೆ ಪೊಲೀಸರು ವಾರಸುದಾರರ ಪತ್ತೆಗೆ ಕ್ರಮ ಜರುಗಿಸಿದ್ದಾರೆ.