ಶಿವಮೊಗ್ಗ: ಜನೌಷಧ ಕೇಂದ್ರಗಳನ್ನು ಮುಚ್ಚುತ್ತಿಲ್ಲ. ಕೇಂದ್ರವು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇರಬಾರದು ಎಂಬುದು ನಮ್ಮ ಆಶಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಔಷಧಗಳು ಸಿಗುತ್ತವೆ. ವೈದ್ಯರು ಬರೆದುಕೊಡುವ ಔಷಧಗಳು ನಮ್ಮ ಆಸ್ಪತ್ರೆಯಲ್ಲೇ ಸಿಗುತ್ತವೆ. ಹಾಗಾಗಿ ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದರು. ಸರ್ಕಾರಿ ಆಸ್ಪತ್ರೆಯಗಳಲ್ಲಿ ಮೆಡಿಸಿನ್ ಸಿಗುವಂತೆ ನಾವು ಮಾಡುತ್ತೇವೆ. ರಾಜ್ಯದಲ್ಲಿ 1,400 ಜನೌಷಧ ಕೇಂದ್ರಗಳಿದ್ದು, ಅದರಲ್ಲಿ 180 ಕೇಂದ್ರಗಳು ಸರ್ಕಾರಿ ಆಸ್ಪತ್ರೆಯಲ್ಲಿವೆ. ನಮ್ಮಲ್ಲಿ ಔಷಧ ಉಚಿತವಾಗಿ ಸಿಗಲಿದ್ದು, ಅದನ್ನು ಹಣಕ್ಕೆ ಖರೀದಿಸದಂತೆ ಜನೌಷಧ ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ರೂಪಾಂತರ ಕರೊನಾ ದೊಡ್ಡ ಪರಿಣಾಮವೇನು ಬೀರಲ್ಲ. ಆದರೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ನಿರ್ಲಕ್ಷ್ಯ ತೋರಬಾರದು. ಜನರ ಮಧ್ಯೆ ಹೋದಾಗ ಎಲ್ಲರೂ ಮಾಸ್ಕ್ ಧರಿಸುವುದು ಸೂಕ್ತ. ಉಸಿರಾಟದ ಸಮಸ್ಯೆ ಇದ್ದರೆ ಪರೀಕ್ಷಿಸಿಕೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿ ಯಾರಿಗಾದರೂ ಜ್ವರ, ಶೀತ ಬಂದಿದ್ದರೆ ಪರೀಕ್ಷೆ ನಡೆಸಬೇಕೆಂದು ಶಾಲಾ ಶಿಕ್ಷಕರಿಗೆ ತಿಳಿಸಲಾಗಿದೆ ಎಂದರು.