ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ಕಚೇರಿಯ ಆಡಳಿತ ಶಾಖೆಯಲ್ಲಿ ಗೈರು ಹಾಜರಾತಿ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಯಮುನಾ ನಾಗರಾಜ ನಾಯಕ್ ಅವರನ್ನು ಶನಿವಾರ ಸನ್ಮಾನಿಸಿ ಬೀಳ್ಕೊಡಲಾಯಿತು.
ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಎಚ್. ರಾಮನಗೌಡ ಸನ್ಮಾನಿಸಿ ಮಾತನಾಡಿ, 1987ರಲ್ಲಿ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಸೇವೆಗೆ ನೇಮಕಗೊಂಡ ಯಮುನಾ ನಾಯಕ್ ಅವರು, ಕೋವಿಡ್ ಸಂಕಷ್ಟದ ಅವಧಿಯೂ ಸೇರಿದಂತೆ 36 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಒಂದು ದಿನವೂ ಗೈರು ಹಾಜರಾಗದೆ ಕೆಲಸ ಮಾಡಿದ್ದಾರೆ. ನಿವೃತ್ತಿಯ ಕೊನೆಯ ಕ್ಷಣದವರೆಗೆ ಕಡತಗಳ ನಿರ್ವಹಣೆ ಕಾರ್ಯ ನಿರ್ವಹಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಯಾವುದೇ ದೂರುಗಳಿಗೆ ಅವಕಾಶ ನೀಡದ, ಸಹೊದ್ಯೋಗಿಗಳೊಂದಿಗೆ ಅವರ ಸೌಹಾರ್ದ, ಒಡನಾಟ ಇಂದಿನ ಪೀಳಿಗೆ ನೌಕರರಿಗೆ ಮಾದರಿ ಎಂದು ಸ್ಮರಿಸಿದರು.
ಸನ್ಮಾನ ಸ್ವೀಕರಿಸಿ ಯಮುನಾ ನಾಯಕ್ ಮಾತನಾಡಿ, ತಮ್ಮ ಪತಿ, ಮಕ್ಕಳು, ಕುಟುಂಬದ ಸದಸ್ಯರು, ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದರು
ಅಧಿಕಾರಿಗಳಾದ ಸುನೀಲ ವಾಡೇಕರ, ಸದಾನಂದ ಒಡೆಯರ, ರಾಜೇಂದ್ರ, ವಿವಿಧ ಕಾರ್ಮಿಕ ಸಂಟನೆಗಳ ಮುಖಂಡರು ಹಾಗೂ ಕಚೇರಿಯ ಸಿಬ್ಬಂದಿ ಇದ್ದರು.