ಮಂಜುನಾಥ ಸಾಯೀಮನೆ ಶಿರಸಿ
ಒಮ್ಮೆ ಅಡಕೆ ದರದ ನಾಗಾಲೋಟ, ರೈತರಿಗೆ ಅಡಕೆ ಮಾರುವುದೋ ಬಿಡುವುದೋ ಎಂಬಂಥ ರೋಚಕತೆ, ಇನ್ನೊಮ್ಮೆ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದ ಸ್ಥಿತಿ. ವಾರ್ಷಿಕವಾಗಿ ಸಾವಿರಾರು ಕೋಟಿ ರೂ. ವಹಿವಾಟಾಗುವ ಅಡಕೆ ಮಾರುಕಟ್ಟೆ ಷೇರು ಮಾರುಕಟ್ಟೆಯಂತಾಗಿದೆ.
ಇಲ್ಲಿ ವ್ಯಾಪಾರಸ್ಥರ ನಸೀಬು ಗಟ್ಟಿ ಇದ್ದರೆ ಒಂದೇ ತಿಂಗಳಿನಲ್ಲಿ ದೊಡ್ಡ ವ್ಯಾಪಾರಸ್ಥರಾಗುತ್ತಾರೆ, ನಸೀಬು ಕೆಟ್ಟರೆ ವಾಸ್ತವ್ಯದ ಮನೆಯನ್ನೂ ಮಾರಾಟ ಮಾಡಬೇಕಾಗುತ್ತದೆ. ಇಂದು ಅಡಕೆ ವ್ಯಾಪಾರವೂ ಒಂದು ರೀತಿಯಲ್ಲಿ ಜೂಜಿನಂತಾಗಿದೆ.
ಜಿಲ್ಲೆಯಲ್ಲಿ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ಅಡಕೆಯ ಪ್ರಮುಖ ಮಾರುಕಟ್ಟೆಗಳು. ನೂರಾರು ಸಣ್ಣ, ದೊಡ್ಡ ವ್ಯಾಪಾರಸ್ಥರು ಪ್ರತಿ ದಿನ ಇಲ್ಲಿ ಅಡಕೆ ಖರೀದಿಸುತ್ತಾರೆ, ತಾವು ಒಪ್ಪಂದ ಮಾಡಿಕೊಂಡ ಉತ್ತರ ಭಾರತದ ವ್ಯಾಪಾರಸ್ಥರಿಗೆ ಅಡಕೆ ಕಳಿಸಿಕೊಡುತ್ತಾರೆ. ಆದರೆ, ಅಡಕೆಗೆ ದರ ಎಷ್ಟು ಬರೆಯಬೇಕು ಎಂಬುದು ಮಾತ್ರ ಉತ್ತರ ಭಾರತದ ಅಡಕೆ ವ್ಯಾಪಾರಸ್ಥರು ಸಲ್ಲಿಸುವ ಅಡಕೆ ಬೇಡಿಕೆಯನ್ನು ಆಧರಿಸಿ ನಿರ್ಧಾರವಾಗುತ್ತದೆ.
ಬೇಡಿಕೆ ಹೆಚ್ಚಾಯಿತೆಂದರೆ ಒಮ್ಮೆಲೇ ಅಡಕೆ ಮಾರುಕಟ್ಟೆಯಲ್ಲಿ ದರದ ನಾಗಾಲೋಟ, ಉತ್ತರ ಭಾರತದಲ್ಲಿ ಬೇಡಿಕೆ ಇಲ್ಲ ಎಂದಾದರೆ ಇಲ್ಲಿ ಅಡಕೆ ಕೇಳುವವರಿಲ್ಲ, ವ್ಯಾಪಾರಸ್ಥರೂ ಕಡಿಮೆ ದರಕ್ಕೆ ಟೆಂಡರ್ ಬರೆಯುತ್ತಾರೆ. ದರ ಬಂದಾಗ ರೈತರಿಗೆ ಉತ್ಸಾಹ, ದರ ಬಿದ್ದಾಗ ಅನಿವಾರ್ಯತೆಯಲ್ಲಿ ಅಡಕೆ ಮಾರಬೇಕಾದ ಸ್ಥಿತಿ ರೈತರದು.
ಅಡಕೆಗೆ ದರ ಕುಸಿತವಾದಾಗಲೆಲ್ಲ ರೈತರ ಬೆಂಬಲಕ್ಕೆ ನಿಂತು ಮಾರುಕಟ್ಟೆ ದರ ಸ್ಥಿರಗೊಳಿಸಲು ಅಡಕೆ ವಹಿವಾಟು ನಡೆಸುವ ಸಂಸ್ಥೆಗಳೇ ಹೆಚ್ಚಿನ ದರದಲ್ಲಿ ಟೆಂಡರ್ ಬರೆದು ತಾವೇ ಲಕ್ಷಾಂತರ ಕ್ವಿಂಟಾಲ್ ಅಡಕೆ ಖರೀದಿಸಿ ದಾಸ್ತಾನು ಮಾಡುತ್ತವೆ. ಶಿರಸಿಯ ಟಿಎಸ್ಎಸ್, ಟಿಂಎಂಎಸ್ ನಂತಹ ಸಂಸ್ಥೆಗಳು ಈ ಯತ್ನವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚಿನ ವರ್ಷಗಳ ಅಡಕೆ ಮಾರುಕಟ್ಟೆ ಸಂಸ್ಥೆಗಳ ಪ್ರಯತ್ನವನ್ನೇ ತಲೆಕೆಳಗೆ ಮಾಡಿವೆ. 80 ಲಕ್ಷ ಕ್ವಿಂಟಾಲ್ ದೇಶದಲ್ಲಿ ಒಟ್ಟು ಉತ್ಪಾದನೆಯಾಗುತ್ತಿದ್ದರೆ ಜಿಲ್ಲೆಯಲ್ಲಿ ಸುಮಾರು 8ರಿಂದ 9 ಲಕ್ಷ ಕ್ವಿಂಟಾಲ್ ಅಡಕೆ ಉತ್ಪಾದನೆಯಾಗುತ್ತಿದೆ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ದರ ಕುಸಿತವಾದಾಗ ಸಹಕಾರಿ ಸಂಸ್ಥೆಗಳು ರೈತರ ಅಡಕೆ ಖರೀದಿಸಿ ದರ ಸ್ಥಿರತೆಗೆ ಯತ್ನಿಸುತ್ತಿದ್ದರೆ, ದೇಶದೊಳಗೆ ಅಕ್ರಮವಾಗಿ ಪ್ರವೇಶಿಸುವ ಅಡಕೆ ಈ ಸ್ಥಾನವನ್ನು ತುಂಬಿಕೊಳ್ಳುತ್ತಿದೆ. ಇನ್ನೊಂದೆಡೆ ಸ್ಥಳೀಯ ವರ್ತಕರೂ ಸಹ ಅಡಕೆ ಖರೀದಿಸಿ ಉತ್ತರ ಭಾರತದ ಮಾರುಕಟ್ಟೆಗೆ ಕಳಿಸಿದ್ದರೆ, ಅಲ್ಲಿಯ ವ್ಯಾಪಾರಸ್ಥರು ಕಡಿಮೆ ದರಕ್ಕೆ ಕೇಳುವುದೇ ಜಾಸ್ತಿ. ಅಡಕೆಯನ್ನು ಅಗತ್ಯಕ್ಕೆ ತಕ್ಕಂತೆ ಕಳಿಸಿಕೊಟ್ಟು, ಉತ್ತರದ ಮಾರುಕಟ್ಟೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕಸರತ್ತೆಲ್ಲ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿಯ ಸಂಸ್ಥೆ ಹಾಗೂ ವ್ಯಾಪಾರಸ್ಥರಿಂದ ಸಾಧ್ಯವಾಗುತ್ತಿಲ್ಲ. ಅಡಕೆ ಬೆಳೆಯ ಕ್ಷೇತ್ರವೂ ಈಗ ವಿಸ್ತರಣೆಯಾಗಿದ್ದರಿಂದ ಮುಂದಿನ ವರ್ಷಗಳಲ್ಲಿ ಕರ್ನಾಟಕದ ಅಡಕೆ ವ್ಯಾಪಾರಸ್ಥರು ಹೊರ ರಾಜ್ಯಗಳ ಅಡಕೆ ವ್ಯಾಪಾರಸ್ಥರೊಂದಿಗೆ ಉತ್ತರ ಭಾರತದ ಮಾರುಕಟ್ಟೆಗಾಗಿ ಪೈಪೋಟಿ ನಡೆಸುವ ಸಾಧ್ಯತೆ ಬರಲಿದೆ.
ಪಾನ್ ಮಸಾಲಾ ಕಂಪನಿಗಳ ಮಾರುಕಟ್ಟೆ ಹಿಡಿತ: ಅಡಕೆ ಬಳಕೆಯ ವಿಧಾನ ಇಂದು ಬದಲಾಗಿದೆ. ತಾಂಬೂಲದೊಂದಿಗೆ ಅಡಕೆ ಬಳಸುವ ಬದಲು ಇಂದು ಪಾನ್ ಮಸಾಲಾ ಮೂಲಕ ಅಡಕೆ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಉತ್ತರ ಭಾರತದಲ್ಲಿ ಅಡಕೆಯ ಪ್ರಮುಖ ಮಾರುಕಟ್ಟೆ ಪಾನ್ ಮಸಾಲಾ ಕಂಪನಿಗಳಾಗುತ್ತಿದ್ದು, ಶೇ.70ಕ್ಕೂ ಅಧಿಕ ಅಡಕೆಯನ್ನು ಅವರೇ ಖರೀದಿಸುತ್ತಿದ್ದಾರೆ. ಈ ಕಂಪನಿಗಳಿಗೆ ಗುಣಮಟ್ಟದ ಅಡಕೆ ಕಡಿಮೆ ದರದಲ್ಲೇ ಸಿಗುತ್ತಿರುವಾಗ ಖರೀದಿಗೆ ಸ್ಪರ್ಧೆ ಏರ್ಪಡುತ್ತಿಲ್ಲ, ಮಾರುಕಟ್ಟೆಯಲ್ಲಿ ದರ ಏರಿಕೆ ಆಗುತ್ತಿಲ್ಲ. ಇದರ ಪರಿಣಾಮವಾಗಿ ಕಳೆದ 15 ದಿನಗಳ ಹಿಂದೆ ಚಾಲಿ ಅಡಕೆ ಪ್ರತಿ ಕ್ವಿಂಟಾಲ್ಗೆ 38 ಸಾವಿರ ದರ ಪಡೆದುಕೊಂಡಿತ್ತಾದರೂ ಈ ವಾರ ಮತ್ತೆ 2 ಸಾವಿರ ರೂ.ಗಳಷ್ಟು ಕುಸಿತವಾಗಿ 36 ಸಾವಿರ ರೂ. ಪ್ರತಿ ಕ್ವಿಂಟಾಲ್ಗೆ ಲಭಿಸುತ್ತಿದೆ. ಇನ್ನೊಂದೆಡೆ ಕಳೆದ ನಾಲ್ಕು ತಿಂಗಳಿಂದ ಎರಡನೇ ದರ್ಜೆಯ ಅಡಕೆಗಳಾದ ಚಾಲಿ ಕೆಂಪು, ಕೋಕಾ ಇನ್ನಿತರ ಮಾದರಿಯ ಅಡಕೆಗೆ ಉತ್ತರ ಭಾರತದಿಂದ ಬೇಡಿಕೆಯೇ ಬರುತ್ತಿಲ್ಲ. ಇಲ್ಲಿಯ ವ್ಯಾಪಾರಸ್ಥರು ಈ ಮಾದರಿಯ ಅಡಕೆಯನ್ನು ರೈತರಿಂದ ಖರೀದಿಸಿದ್ದರೂ ಕಡಿಮೆ ದರದಲ್ಲಿ ರಾಜ್ಯದ ಒಳಗಿನ ಮಾರುಕಟ್ಟೆಗೇ ಅನಿವಾರ್ಯವಾಗಿ ಪೂರೈಸುತ್ತಿದ್ದಾರೆ.
ವಾಪಸ್ ಬಂತು ಅಡಕೆ !: ಸಂಸ್ಕರಿಸಿ ಸಿದ್ಧಪಡಿಸಿದ ಅಡಕೆಯಲ್ಲಿ ನೀರಿನ ಅಂಶ ಶೇ. 11ರಷ್ಟಿದೆ ಎಂಬ ಕಾರಣಕ್ಕೆ ಕಳೆದ ತಿಂಗಳು ಜಿಲ್ಲೆಯ ಕೆಲ ವರ್ತಕರು ಉತ್ತರ ಭಾರತಕ್ಕೆ ಕಳಿಸಿದ ಅಡಕೆ ತಿರಸ್ಕಾರವಾಗಿ ವಾಪಸ್ ಬಂದಿದೆ!. ಅಡಕೆಯಲ್ಲಿ ನೀರಿನಂಶ ಶೇ.5ರಷ್ಟು ಮಾತ್ರ ಇರಬೇಕು ಎಂಬುದು ಅವರ ಆಗ್ರಹ. ಸುಮಾರು 1 ಸಾವಿರ ಕ್ವಿಂಟಾಲ್ಗಳಷ್ಟು ಅಡಕೆ ವಾಪಸ್ ಬಂದು ವ್ಯಾಪಾರಸ್ಥರು ಹಾನಿ ಅನುಭವಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಹಕಾರಿ ಸಂಘಗಳ ಆವರಣದಲ್ಲಿಯೇ ರೈತರ ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ಜೋರಾಗಿ ನಡೆಯುತ್ತಿದ್ದು, ಬೇರೆ ಬೇರೆ ಜಿಲ್ಲೆಯವರೂ ಇಲ್ಲಿಗೆ ಬಂದು ಖರೀದಿಸುತ್ತಿದ್ದಾರೆ. ಈ ರೀತಿಯಲ್ಲಿ ಮಾರಾಟವಾದ ಅಡಕೆ ಸಂಸ್ಕರಣೆ ಹೇಗೆ ನಡೆಯುತ್ತಿದೆ. ಬಳಿಕ ಎಲ್ಲಿಯ ಮಾರುಕಟ್ಟೆಗೆ ಈ ಅಡಕೆ ಸಾಗುತ್ತದೆ ಎಂಬ ಬಗ್ಗೆ ಸ್ಥಳೀಯರಿಗೆ ನಿಖರ ಮಾಹಿತಿಗಳೇ ಇಲ್ಲ !
ಶಿರಸಿಯಲ್ಲಿ ಇತ್ತೀಚೆಗಷ್ಟೇ ಅಡಕೆಯ ಕುರಿತಾಗಿ ಕಾರ್ಯಾಗಾರವೊಂದು ನಡೆದಿದೆ. ರೈತರು ಗುಣಮಟ್ಟದಿಂದ ಅಡಕೆ ಉತ್ಪಾದಿಸುತ್ತಾರೆ. ಸ್ಥಳೀಯ ವ್ಯಾಪಾರಸ್ಥರು ಈ ಅಡಕೆಯನ್ನು ಖರೀದಿಸಿ ಉತ್ತರ ಭಾರತದ ವ್ಯಾಪಾರಸ್ಥರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದ್ದಾರೆ. ಆದರೆ, ಆ ಬಳಿಕ ಅಡಕೆ ಮುಂದೇನಾಗುತ್ತದೆ ಎಂಬ ಬಗ್ಗೆ ಸ್ಥಳೀಯ ವ್ಯಾಪಾರಸ್ಥರಿಗಾಗಲಿ, ಅಡಕೆ ವಹಿವಾಟು ಸಂಸ್ಥೆಗಳಿಗಾಗಲಿ ಗೊತ್ತಾಗುವುದಿಲ್ಲ. ಅಡಕೆ ಉತ್ಪಾದಕನಿಂದ ಗ್ರಾಹಕರವರೆಗೆ ತಲುಪುವವರೆಗೆ ಗುಣಮಟ್ಟ ಕಾಯ್ದುಕೊಳ್ಳುವ ಕುರಿತು ಚಿಂಥನ-ಮಂಥನಗಳು ನಡೆದಿವೆ. ಉತ್ಪಾದಕನಿಂದ ಗ್ರಾಹಕರವರೆಗೂ ಅಡಕೆಯ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಅಡಕೆಯ ಮಾರುಕಟ್ಟೆ, ದರ ಸ್ಥಿರತೆ ಕಾಯ್ದುಕೊಳ್ಳಬೇಕಾಗಿದೆ. ಹಣ ಗಳಿಸುವ ಆತುರದಲ್ಲಿ ಉತ್ತರ ಭಾರತದ ವ್ಯಾಪಾರಸ್ಥರು ಅಥವಾ ಅಲ್ಲಿಯ ಚಿಲ್ಲರೆ ವರ್ತಕರು ಜಿಲ್ಲೆಯ ಗುಣಮಟ್ಟದ ಅಡಕೆಯೊಂದಿಗೆ ವಿದೇಶದಿಂದ ಆಮದಾದ ಕಳಪೆ ಅಡಕೆ ಮಿಶ್ರಣ ಮಾಡಿ ಮಾರುಕಟ್ಟೆಯಲ್ಲಿ ದರ ಕುಸಿತಗೊಂಡರೆ ಅದೇ ನೇರ ಪರಿಣಾಮ ಜಿಲ್ಲೆಯ ಸಣ್ಣ ಅಡಕೆ ಬೆಳೆಗಾರರ ಮೇಲಾಗುತ್ತದೆ. ಈಗಾಗಲೇ ಹಲವು ಸಮಸ್ಯೆಗಳಿಂದ ಜರ್ಜರಿತವಾದ ಅಡಕೆ ಬೆಳೆಗಾರನಿಗೆ ಮಾರುಕಟ್ಟೆ ಸಮಸ್ಯೆಯೂ ಕಾಡುವಂತಾಗಿದೆ.
ಹೊರಗಿನ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಕಾರಣಕ್ಕಾಗಿ ನಮ್ಮ ಭಾಗದ ಅಡಕೆಗೆ ಬೇಡಿಕೆ ಇದ್ದೇ ಇದೆ. ಆದರೆ, ಅಕ್ರಮವಾಗಿ ಹೊರಗಿನ ಅಡಕೆ ಆಮದು ಮಾಡಿಕೊಂಡು ಸ್ಥಳೀಯ ಅಡಕೆಯೊಂದಿಗೆ ಮಿಶ್ರಣ ಮಾಡುವುದನ್ನು ತಡೆಯಬೇಕು. ಮುಖ್ಯವಾಗಿ ಅಡಕೆ ಆಮದನ್ನೇ ತಡೆಯಬೇಕು. | ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಅಡಕೆ ವರ್ತಕ, ಯಲ್ಲಾಪುರ ಕಳೆದ ತಿಂಗಳು ಟಿಎಸ್ಎಸ್ ಸೇರಿ ಅಡಕೆ ವಹಿವಾಟು ಸಂಸ್ಥೆಗಳು, ಅಡಕೆ ಬೆಳೆಯುವ ಕ್ಷೇತ್ರಗಳ ಸಂಸದರ ನಿಯೋಗ ಕೇಂದ್ರ ಸಚಿವ ಶಿವರಾಜ ಸಿಂಗ್ ಚೌಹಾಣ ಅವರನ್ನು ಭೇಟಿಯಾಗಿ ಅಡಕೆ ಬೆಳೆಗಾರರ, ಮಾರುಕಟ್ಟೆ ಸಮಸ್ಯೆ ಬಗ್ಗೆ ವಿವರಿಸಿದ್ದೇವೆ. ಗಡಿಯಲ್ಲಿ ಅಡಕೆಯ ಅಕ್ರಮ ತಡೆಯಲು ಅವರು ಕಟ್ಟುನಿಟ್ಟಿನ ಸೂಚನೆ ನೀಡಿ, ಕಾರ್ಯರೂಪಕ್ಕಿಳಿಸಿದ್ದರ ಪರಿಣಾಮ ಸಹ ವ್ಯಕ್ತಗೊಳ್ಳುತ್ತಿದೆ. ರಾಜ್ಯದ ಗುಣಮಟ್ಟದ ಅಡಕೆಗೆ ಬೇಡಿಕೆ ಹೆಚ್ಚುತ್ತಿದೆ. ಇದೇ ರೀತಿ ಅಕ್ರಮ ಆಮದು ತಡೆಗಟ್ಟುವ ಕಾರ್ಯವನ್ನು ನಿರಂತರವಾಗಿ ನಡೆಸಿದರೆ ಮುಂದಿನ ದಿನಗಳಲ್ಲಿ ಅಡಕೆಗೆ ಉತ್ತಮ ದರ ಕಾಯ್ದುಕೊಳ್ಳಬಹುದು. | ಗೋಪಾಲಕೃಷ್ಣ ವೈದ್ಯ. ಅಧ್ಯಕ್ಷರು, ಟಿಎಸ್ಎಸ್ ಶಿರಸಿ