ಎಂಇಎಸ್ ಪುಂಡರಿಗೆ ಕಪಾಳಮೋಕ್ಷ ಮಾಡಲು ಮುಂದಾದ ಲಕ್ಷ್ಮೀ ನಿಪ್ಪಾಣಿಕರ್ ಅವರನ್ನು ತಡೆದ ಪಾಲಿಕೆ ಸಿಬ್ಬಂದಿ. 
ಜಿಲ್ಲೆ

ಲಕ್ಷೀ ರೌದ್ರಾವತಾರ, ಎಂಇಎಸ್ ಕಂಗಾಲು!; ಬ್ಯಾನರ್​ನಲ್ಲಿ ಕನ್ನಡ ಬಳಸಿದ್ದಕ್ಕೆ ಬೆದರಿಕೆ, ಪುಂಡರಿಗೆ ಉಪ ಆಯುಕ್ತೆ ತರಾಟೆ

Webdesk - Ravikanth

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲುಂಡು ತೀವ್ರ ಮುಖಭಂಗ ಅನುಭವಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪುಂಡರು, ಗಣೇಶ ವಿಸರ್ಜನೆ ವೇಳೆ ಭಾಷಾ ವಿಷಯ ಕೆದಕಿ ಶಾಂತಿ ಸುವ್ಯವಸ್ಥೆ ಕದಡಲು ಪ್ರಯತ್ನಿಸಿದ್ದಾರೆ. ನಾಡದ್ರೋಹಿಗಳ ವರ್ತನೆಗೆ ಸಿಡಿಮಿಡಿಗೊಂಡ ಪಾಲಿಕೆ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್, ‘ಕನ್ನಡದ ಖದರ್’ ಏನೆಂಬುದನ್ನು ತೋರಿಸಿದ್ದಾರೆ. ನಗರದಲ್ಲಿ 370ಕ್ಕೂ ಅಧಿಕ ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು. ಭಾನುವಾರ ಬೆಳಗ್ಗೆ ಆರಂಭಗೊಂಡ ವಿಗ್ರಹಗಳ ವಿಸರ್ಜನೆ ಕಾರ್ಯ ಸೋಮವಾರ ನಸುಕಿನ ಜಾವದವರೆಗೂ ನಡೆಯಿತು. ವಿಸರ್ಜನೆ ವೇಳೆ ಯಾವುದೇ ಸಮಸ್ಯೆ ಉಂಟಾಗಬಾರದೆಂದು ಹಾಗೂ ಗಣ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲು ನಗರದ ಕಪಿಲೇಶ್ವರ ಹೊಂಡದ ಬಳಿ ಪಾಲಿಕೆ ನಿರ್ವಿುಸಿದ್ದ ವೇದಿಕೆ ಹಿಂಭಾಗದಲ್ಲಿ ಕನ್ನಡ ಬ್ಯಾನರ್ ಅಳವಡಿಸಲಾಗಿತ್ತು. ಬ್ಯಾನರ್​ನಲ್ಲಿ ಮರಾಠಿ ಭಾಷೆ ಏಕೆ ಬಳಸಿಲ್ಲ ಎಂದು ಲಕ್ಷ್ಮೀ ಅವರೊಂದಿಗೆ ಎಂಇಎಸ್ ಪುಂಡರು ವಾಗ್ವಾದ ನಡೆಸಿದರು. ಅಲ್ಲದೆ, ಕೆಲವರು ಬೆದರಿಕೆಯನ್ನೂ ಒಡ್ಡಿದರು.

ಕಪಾಳಮೋಕ್ಷಕ್ಕೆ ಮುಂದಾದ ಅಧಿಕಾರಿ: ಆಕ್ಷೇಪ ಹಾಗೂ ಬೆದರಿಕೆ ಹಿನ್ನೆಲೆಯಲ್ಲಿ ‘ರೌದ್ರ ಅವತಾರ’ ತಾಳಿದ ಲಕ್ಷ್ಮೀ, ಪುಂಡರನ್ನು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲ, ಅವರ ಕೆನ್ನೆಗೆ ಬಾರಿಸಲು ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ಪಾಲಿಕೆ ಸಿಬ್ಬಂದಿ, ಸ್ಥಳೀಯ ಮುಖಂಡರು ತಡೆದರು. ಬಳಿಕ ಎಂಇಎಸ್ ನಾಯಕರು, ಸ್ಥಳದಲ್ಲಿಯೇ ಅಧಿಕಾರಿಗೆ ಕೈಮುಗಿದು, ತಪ್ಪಾಗಿದೆ ಎಂದು ವಿನಂತಿಸಿದರು. ಇದಕ್ಕೂ ಸುಮ್ಮನಾಗದ ಲಕ್ಷ್ಮೀ, ‘ತಾಕತ್ತಿದ್ರೆ ವೇದಿಕೆ ಮೇಲೆ ಬಾರೋ. ಇಲ್ಲಾ, ಅಲ್ಲೇ ನಿಂತ್ಕೋ ನಾನೇ ಬರ್ತೆನೆ’ ಎಂದು ಗುಡುಗುತ್ತಿದ್ದಂತೆ, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು. ಬಳಿಕ ಪುಂಡರು ಅಲ್ಲಿಂದ ಕಾಲ್ಕಿತ್ತರು.

ಬ್ಯಾನರ್​ನಲ್ಲಿ ಕನ್ನಡದ ಜತೆ ಮರಾಠಿ ಭಾಷೆ ಬಳಸದಿರುವ ವಿಷಯಕ್ಕಾಗಿ ಪಾಲಿಕೆ ಅಧಿಕಾರಿ ಜತೆಗೆ ಕೆಲವರು ವಾಗ್ವಾದ ನಡೆಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

| ರುದ್ರೇಶ ಘಾಳಿ ಪಾಲಿಕೆ ಆಯುಕ್ತ, ಬೆಳಗಾವಿ