ಜಿಲ್ಲೆ

ಅ.4, 5ಕ್ಕೆ ಅನಿವಾಸಿ ಕನ್ನಡಿಗರ ಸಮ್ಮೇಳನ; ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ

ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ.4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ವಿದೇಶಿ ಕನ್ನಡ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈಗಾಗಲೇ ವಿಶ್ವದ ವಿವಿಧ ದೇಶಗಳಲ್ಲಿ ಅಂತರರಾಷ್ಟ್ರೀಯ ಕನ್ನಡ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿರುವ ಮಂಗಳೂರಿನ ಹೃದಯ ವಾಹಿನಿ ಸಂಸ್ಥೆಯು ತನ್ನ ರಜತ ಮಹೋತ್ಸವದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2 ದಿನಗಳ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಸಮ್ಮೇಳನದಲ್ಲಿ ಸುಮಾರು 30 ದೇಶಗಳಲ್ಲಿ ನೆಲೆಸಿರುವ ಕನ್ನಡದ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ಅ.4 ಶುಕ್ರವಾರ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಹಾಗೂ ಸಾರ್ವಜನಿಕರಿಗಾಗಿ ಕನ್ನಡ ಕವನ ರಚನಾ ಸ್ಪರ್ಧೆ ನಡೆಯಲಿದೆ. ಅ.5 ಶನಿವಾರ ಕಾಲೇಜು ವಿದ್ಯಾರ್ಥಿಗಳಿಗೆ ಸಮೂಹಗಾನ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ ನಡೆಯಲಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಸ್ಪರ್ಧೆಗಳು ನಡೆಯಲಿದ್ದು, ಅದೇ ದಿನ ಮಧ್ಯಾಹ್ನ 1.30ಕ್ಕೆ ಲಿತಾಂಶ ಪ್ರಕಟವಾಗಲಿದೆ. ನಾಲ್ಕು ಸ್ಪರ್ಧೆಗಳಿಗೂ ಪ್ರತ್ಯೇಕವಾಗಿ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 5 ಸಾವಿರ ಮತ್ತು ತೃತೀಯ ಬಹುಮಾನ 3 ಸಾವಿರ ನಗದು ಹಾಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ತಮ್ಮ ಸ್ವಂತ ಖರ್ಚಿನಲ್ಲಿ ಸ್ಪರ್ಧಿಗಳು ಬಂದು ಹೋಗಬೇಕು. ಬೆಳಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ಸೀಮಿತ ಸ್ಪರ್ಧಿಗಳಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ. ಹೆಸರು ನೋಂದಾಯಿಸಲು ಕಡೇ ದಿನಾಂಕ ಸೆ.29. ಸ್ಪರ್ಧೆಯ ನಿಯಮ ಮತ್ತಿತರ ಹೆಚ್ಚಿನ ಮಾಹಿತಿಗೆ ದೂ:9886510087 ಈ ಸಂಖ್ಯೆಗೆ ಕೇವಲ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು.