ಜಿಲ್ಲೆ

ಪಕ್ಷಾತೀತ ಹೋರಾಟಕ್ಕೆ ಪೂರ್ಣ ಬೆಂಬಲ - ಶಾಸಕ ರಾಜಾ ವೆಂಕಟಪ್ಪ ನಾಯಕ ಭರವಸೆ

Raichur

ಮಾನ್ವಿ: ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಮೇಲ್ಭಾಗದಲ್ಲಿ ಅಕ್ರಮವಾಗಿ ಹಾಕಿರುವ ಪೈಪ್‌ಲೈನ್ ತೆರವಿಗೆ ಆ.6 ರಂದು ನಡೆಯುವ ರೈತರ ಹೋರಾಟಕ್ಕೆ ಜೆಡಿಎಸ್ ಪೂರ್ಣ ಬೆಂಬಲ ನೀಡಲಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಕಾಲುವೆಯ ಮೇಲ್ಭಾಗದಲ್ಲಿ ಕೆಲ ಪ್ರಭಾವಿಗಳು ಅಕ್ರಮವಾಗಿ ನೀರು ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಆದ್ದರಿಂದ ಈ ಹೋರಾಟದಲ್ಲಿ ಮಾನ್ವಿ, ಸಿರವಾರ, ರಾಯಚೂರು ಭಾಗದ ರೈತರು, ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಬೇಕು ಎಂದು ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದರು.

ಸಿಎಂ ಬಿ.ಎಸ್.ಯಡಿಯೂರಪ್ಪನವರ ಬಳಿ ಸರ್ವ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ರೈತರು ನಿಯೋಗದೊಂದಿಗೆ ತೆರಳಿ ಆಕ್ರಮ ನೀರಾವರಿ ವಿರುದ್ಧ ಕ್ರಮ ಕೈಗೊಳ್ಳು ಮನವಿ ಸಲ್ಲಿಸಲಾಗಿತ್ತು. ಅವರು ಕೂಡ ಮನವಿಗೆ ಸ್ಪಂದಿಸಿ, ಅಕ್ರಮ ನೀರಾವರಿ ಪೈಪ್‌ಗಳ ತೆರವಿಗೆ ಆದೇಶ ನೀಡಿದ್ದರು. ಆದರೆ, ಅಧಿಕಾರಿಗಳು ತರೆವಿಗೆ ಮುಂದಾಗಿಲ್ಲ ಎಂದು ಆರೋಪಿಸಿದರು.

ಆಕ್ರಮ ನೀರಾವರಿ ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಶಾಂತಿಯುತ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ. ಈ ಹಿಂದೆ ನಡೆದ ಐಸಿಸಿ ಸಭೆಯಲ್ಲಿ 69ನೇ ಮೈಲ್‌ನಲ್ಲಿ 1 ಅಡಿಯಷ್ಟು ಕಡಿಮೆ ನೀರಿನ ಪ್ರಮಾಣದ ಕುರಿತು ಗಮನ ಸೆಳೆದಿದ್ದು, ಈ ಬಗ್ಗೆ ಅಧಿಕಾರಿಗಳು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದರು.

ಜೆಡಿಎಸ್ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಬಲ್ಲಟಗಿ, ಮುಖಂಡರಾದ ರಾಜಾ ರಾಮಚಂದ್ರ ನಾಯಕ ಮಹ್ಮದ್ ಇಸ್ಮಾಯಿಲ್, ಖಲೀಲ್ ಖುರೇಶಿ, ಜೆ.ಎಚ್.ದೇವರಾಜ್, ಗೋಪಾಲ ನಾಯಕ ಹರವಿ, ಶಂಕರಗೌಡ ಹರವಿ, ಶರಣಪ್ಪ ಮೇದಾ, ಹನುಮಂತ ಭೋವಿ, ಪಿ.ರವಿಕುಮಾರ, ಮೌಲಾಸಾಬ್, ಬುಡ್ಡಪ್ಪ ನಾಯಕ, ಬಸವರಾಜ ಭಜಂತ್ರಿ, ಜಸ್ವಂತ್ ಸೇಠ್, ಮೌನೇಶ, ಶರಣಪ್ಪ, ಸುಭಾನ್‌ಬೇಗ್ ಇತರರು ಇದ್ದರು.