ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಪಂ ಸದಸ್ಯೆ ಅತ್ತೆ ಸೋನಾಬಾಯಿ ರಾಠೋಡ ಹೃದಯಘಾತದಿಂದ ನಿಧನವಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಸೊಸೆ ಭೀಮಾಬಾಯಿ ರಾಠೋಡ ಚುನಾವಣಾಕಾರಿ ಎಸ್.ಕೆ. ಮಾಳಗೊಂಡ ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು. 
ಜಿಲ್ಲೆ

ಅತ್ತೆ ಸ್ಥಾನಕ್ಕೆ ಸೊಸೆಯಿಂದ ನಾಮಪತ್ರ..!

ಮುದ್ದೇಬಿಹಾಳ: ಅತ್ತೆ ನಿಧನದಿಂದ ತೆರವಾಗಿದ್ದ ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸೊಸೆ ನಾಮಪತ್ರ ಸಲ್ಲಿಸಿದ್ದು, ಅತ್ತೆ ಜಾಗಕ್ಕೆ ಸೊಸೆಯ ಅವಿರೋಧ ಆಯ್ಕೆ ಬಹುತೇಕ ಖಚಿತವೆಂದು ಹೇಳಲಾಗಿದೆ.

ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯಿತಿಯ ಕೊಪ್ಪ ತಾಂಡಾದ ಎಸ್ಸಿ ಮೀಸಲಾತಿ ಅಡಿ 2020ರಲ್ಲಿ ಸದಸ್ಯೆಯಾಗಿ ಸೋನಾಬಾಯಿ ರಾಠೋಡ ಆಯ್ಕೆಯಾಗಿದ್ದರು. ಬಳಿಕ ಹದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು.

ಜು. 6ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದು , ಜು.12 ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಸೋನಾಬಾಯಿ ಅವರ ಸೊಸೆ ಭೀಮಾಬಾಯಿ ರಾಠೋಡ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರ ಆಯ್ಕೆ ಅವಿರೋಧ ಆಗುವುದು ನಿಚ್ಚಳವಾಗಿದೆ.

ನಿಧನವಾಗಿರುವ ಸೋನಾಬಾಯಿ ಅವರ ಸ್ಥಾನವನ್ನು ಸೊಸೆ ಭೀಮಾಬಾಯಿಗೆ ಬಿಟ್ಟುಕೊಡುವುದು ಸೂಕ್ತ ಎಂದು ಗ್ರಾಮದ ಮುಖಂಡರು ನಿರ್ಧಾರಕ್ಕೆ ಬಂದು ಸೊಸೆಯನ್ನು ಗ್ರಾಪಂ ಸದಸ್ಯೆಯಾಗುವ ಅವಕಾಶ ಕಲ್ಪಿಸಿದ್ದಾರೆ.

ಹುಲ್ಲೂರ ಗ್ರಾಪಂನ ಚುನಾವಣಾಧಿಕಾರಿಯಾಗಿ ಎಸ್.ಕೆ. ಮಾಳಗೊಂಡ, ಸಹಾಯಕರಾಗಿ ಪಿ.ಎಸ್. ರಾಯರೆಡ್ಡಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಪಿಡಿಓ ಸಂಗಯ್ಯ ಹಿರೇಮಠ, ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ಇದ್ದರು. ಜು. 26ರಂದು ಲಿತಾಂಶ ಪ್ರಕಟವಾಗಲಿದೆ.

ಕುಂಟೋಜಿ ಗ್ರಾಪಂ: ಕುಂಟೋಜಿ ಗ್ರಾಪಂ ಅಧ್ಯಕ್ಷರಾಗಿದ್ದ ಶಿವಬಸ್ಸು ಸಜ್ಜನ ಅಕಾಲಿಕ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ್ದು ಒಟ್ಟು ಐವರು ನಾಮಪತ್ರ ಸಲ್ಲಿಸಿದ್ದಾರೆ. ಜು. 11 ರಂದು ಶಂಕರಪ್ಪ ಕುರಿ, ಸಂಗಮೇಶ ಗುತ್ತೇದಾರ, ಜು.12ರಂದು ಪರಶುರಾಮ ಬಿರಾದಾರ, ಬಸವರಾಜ ಕೋಳೂರ, ಬಸವರಾಜ ಹುಲಗಣ್ಣಿ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಉಮೇಶ ಮಾಟೂರ, ಸಹಾಯಕ ಚುನಾವಣಾಧಿಕಾರಿ ವಿನೋದ ಝಿಂಗಾಡೆ ಮಾಹಿತಿ ನೀಡಿದ್ದಾರೆ.